ವಿದೇಶ

ವೀಸಾ ಪ್ರಕ್ರಿಯೆ ಸರಳಗೊಳಿಸಿದ ಕೆನಡಾ, ವೀಸಾ ಸಂಬಂಧಿ ಪ್ರಕ್ರಿಯೆ ಇನ್ನಷ್ಟು ತ್ವರಿತ

Srinivasamurthy VN
ಒಟ್ಟಾವಾ: ವಿದ್ಯಾರ್ಥಿಗಳ ವೀಸಾ ಮೇಲಿನ ನಿಯಮಾವಳಿಯನ್ನು ಸಡಿಲಗೊಳಿಸಿರುವ ಕೆನಡಾ ಸರ್ಕಾರ, ವೀಸಾ ಸಂಬಂಧಿ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತ ಹಾಗೂ ಸರಳಗೊಳಿಸಲು ಕ್ರಮಗಳನ್ನು ಕೈಗೊಂಡಿದೆ.
ಇದಕ್ಕೂ ಮೊದಲು ಕೆನಾಡಾದ ವೀಸಾ ಪ್ರಕ್ರಿಯೆಗೆ 60 ದಿನ ತಗುಲುತ್ತಿತ್ತು. ಈಗ ಅದನ್ನು 45 ದಿನಕ್ಕೆ ಇಳಿಸಲಾಗಿದೆ. ಕೆನಡಾಗೆ ತೆರಳಲಿಚ್ಛಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆನಡಾ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಭಾರತ, ಚೀನಾ, ವಿಯೆಟ್ನಾಂ ಹಾಗು ಫಿಲಿಪ್ಪೈನ್ಸ್ ವಿದ್ಯಾರ್ಥಿಗಳ ಸಹಕಾರಿಯಾಗುವಂತೆ ನಿಯಮ ರೂಪಿಸಿದೆ. ಪ್ರಮುಖವಾಗಿ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ತ್ವರಿತಗತಿಯಲ್ಲಿ ವೀಸಾ ನೀಡುವಂತೆ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಅಮೆರಿಕ ಮತ್ತು ಬ್ರಿಟನ್ ದೇಶಗಳ ಕಠಿಣ ವೀಸಾ ನಿಯಮಗಳಿಂದಾಗಿ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಕೆನಡಾದಂತಹ ರಾಷ್ಟ್ರಗಳನ್ನು ಪರ್ಯಾಯವಾಗಿ ನೋಡುತ್ತಿರುವುದು ಕೆನಡಾ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ತನ್ನ ವೀಸಾ ನಿಯಮಾವಳಿಯನ್ನು ಕೆನಡಾ ಸರ್ಕಾರ ಸರಳೀಕರಿಸಿದೆ ಎನ್ನಲಾಗಿದೆ. 
ಅಂಕಿ ಅಂಶಗಳ ಪ್ರಕಾರ 2017ರಲ್ಲಿ ಒಟ್ಟಾರೆ 83,410 ಭಾರತೀಯ ವಿದ್ಯಾರ್ಥಿಗಳು ಕೆನಡಾ ವೀಸಾ ಪಡೆದುಕೊಂಡಿದ್ದಾರೆ. ಇದು ಅದರ ಹಿಂದಿನ ವರ್ಷಕ್ಕಿಂತ ಶೇ.58 ಹೆಚ್ಚಳವಾಗಿದೆ. ಈ ವಿಚಾರದಲ್ಲಿ ಚೀನ ಕೂಡ ಮುಂದಿದ್ದು, ಚೀನಾ ದೇಶದ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಸಾಕಷ್ಟು ಪ್ರಮಾಣದ ಹೆಚ್ಚಳವಾಗಿದೆ. ಕೆನಡಾದಲ್ಲಿ ಒಟ್ಟಾರೆ 4.95 ಲಕ್ಷ ವಿದೇಶೀ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಇವರಲ್ಲಿ ಭಾರತದ 1.24 ಲಕ್ಷ ವಿದ್ಯಾರ್ಥಿಗಳು ಇದ್ದಾರೆ.
SCROLL FOR NEXT