ವಿದೇಶ

ಇಸಿಸ್ ನಿಂದ ಹತ್ಯೆಗೀಡಾಗಿದ್ದ 39 ಭಾರತೀಯರ ಮೃತದೇಹಗಳನ್ನು ಇರಾಕ್ ವಶಕ್ಕೆ ಪಡೆದಿದ್ದು ಹೇಗೆ?

Manjula VN
ಬಾಗ್ದಾದ್: 3 ವರ್ಷಗಳ ಹಿಂದೆ ನಾಪತ್ತೆಯಾಗಿ ಇಸಿಸ್ ಉಗ್ರರಿಂದ ಹತ್ಯೆಗೀಡಾಗಿದ್ದ 39 ಭಾರತೀಯರ ಮೃತದೇಹಗಳನ್ನು ಡಿಎನ್ಎ ಪರೀಕ್ಷೆಯಿಂದ ಪತ್ತೆಹಚ್ಚಲಾಗಿದ್ದು, ಎಲ್ಲಾ ಮೃತದೇಹಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಇರಾಕ್ ಬುಧವಾರ ಮಾಹಿತಿ ನೀಡಿದೆ. 
ನಿನ್ನೆಯಷ್ಟೇ ರಾಜ್ಯಸಭೆಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರನ್ನು ಇಸಿಸ್ ಉಗ್ರರು ಹತ್ಯೆ ಮಾಡಿದ್ದು, ಸಾಮೂಹಿಕ ಸಮಾಧಿ ಮಾಡಿದ್ದಾರೆಂಬ ಆಘಾತಕಾರಿ ಮಾಹಿತಿಯನ್ನು ದೃಢಪಡಿಸಿದ್ದರು. 
ಹತ್ಯೆಗೀಡಾಗಿದ್ದ ಭಾರತೀಯರನ್ನು ಡಿಎನ್ಎ ಪರೀಕ್ಷೆ ಮೂಲಕ ಪತ್ತೆಹಚ್ಚಲಾಗಿದೆ. ಡಿಎನ್ಎ ಪರೀಕ್ಷೆಯಲ್ಲಿ 39 ಮಂದಿ ಭಾರತೀಯರೆಂದು ತಿಳಿದುಬಂದಿದೆ. ಇಸಿಸ್ ಉಗ್ರರು ಎಲ್ಲರ ತಲೆಗಳಿಗೂ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಸಾಮೂಹಿಕ ಸಮಾಧಿಗಳಲ್ಲಿ ಪುರುಷರ ಉದ್ದನೆಯ ಕೂದಲು ಹಾಗೂ ಸಿಖ್ಖ್ ಧರ್ಮದ ಪುರುಷರು ತಮ್ಮ ಕೈಗಳಿಗೆ ಹಾಕಿಕೊಳ್ಳುವ ಬೆಳ್ಳಿ ಕಡಗಗಳು ದೊರಕಿವೆ. ಒಂದು ಮೃತದೇಹದ ಡಿಎನ್ಎ ಪರೀಕ್ಷೆ ಈವರೆಗೂ ಪೂರ್ಣಗೊಂಡಿಲ್ಲ ಎಂದು ಇರಾಕ್ ಮತ್ತು ಭಾರತ ಸರ್ಕಾರ ಹೇಳಿದೆ. 
ದಾಯೇಶ್ ಉಗ್ರರ ಗುಂಪುಗಳು ಈ ಹೀನ ಕೃತ್ಯವನ್ನು ನಡೆಸಿದೆ ಎಂದು ಇರಾಖ್ ಅಧಿಕಾರಿ ನಜಿಹಾ ಅಬ್ದುಲ್ ಅಮೀರ್ ಅಲ್ ಶಿಮಾರಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಅರಬ್ ಭಾಷೆಯಲ್ಲಿ ದಾಯೇಶ್ ಎಂಬ ಪದವನ್ನು ಬಳಸಲಾಗುತ್ತಿದೆ. 
ಶವಗಳು ನಮ್ಮ ಮಿತ್ರರಾಷ್ಟ್ರವಾದ ಭಾರತದ ಪ್ರಜೆಗಳದ್ದು. ಅವರ ಘನತೆಯನ್ನೇನೋ ಕಾಯಲು ಸಾಧ್ಯವಾಗಿರಬಹುದು. ಆದರೆ, ಇಸ್ಲಾಮಿನ ತತ್ವಗಳಿಗೆ ಮಸಿ ಬಳಿಯಲು ದುಷ್ಟ ಶಕ್ತಿಗಳು ಹವಣಿಸಿದ್ದಾರೆಂದು ಇರಾಕ್ ಹುತಾತ್ಮರ ಕಲ್ಯಾಣ ಸಂಘಟನೆ (ಇಸಿಸ್ ಉಗ್ರರ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿದ ನಾಗರೀಕರ ಕುಟುಂಬಗಳ ಹಿತ ಕಾಪಾಡುವ ಸಂಘಟನೆ) ಮುಖ್ಯಸ್ಥ ನಜಿಹಾ ತಿಳಿಸಿದ್ದಾರೆ. 
ಇಸಿಸ್ ಉಗ್ರರು ಯಾವಾಗ ಹತ್ಯೆ ಮಾಡಿ, ಈ ಸಾಮೂಹಿಕ ಸಮಾಧಿ ಮಾಡಿದ್ದಾರೆಂಬ ಮಾಹಿತಿಯನ್ನು ಇರಾಕ್ ಸರ್ಕಾರ ತಿಳಿಸಿಲ್ಲ. ಆದರೆ, ವರ್ಷಗಳ ಹಿಂದೆಯೇ ಈ ಸಮಾಧಿ ಮಾಡಲಾಗಿದೆ ಎಂದು ಇರಾಕ್ ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶ ಝೈದ್ ಅಲಿ ಅಬ್ಬಾಸ್ ಅವರು ಹೇಳಿದ್ದಾರೆ. 
ಇರಾಕ್'ನ ಎರಡನೇ ಅತ್ಯಂತ ದೊಡ್ಡ ನಗರವಾದ ಮೊಸುಲ್ ಅನ್ನು ಇಸಿಸ್ ಉಗ್ರರು 2014ರಲ್ಲಿ ವಶಕ್ಕೆ ಪಡೆದಿದ್ದರು. ಭಾರತದ 40 ಕಾರ್ಮಿಕರ ತಂಡವನ್ನು ಈ ಉಗ್ರರು ಆಗ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು ಪಂಜಾಬ್ ರಾಜ್ಯ ಮೂಲದವರಾಗಿದ್ದಾರೆ. 
ಅವರ ಪೈಕಿ ಗುರ್ದಾಸ್ಪುರದ ಹರ್'ಜೀತ್ ಮಸೀಹ್ ಉಗ್ರರಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಿದ್ದರು. ಉಳಿದ ಎಲ್ಲರನ್ನೂ ಉಗ್ರರು ಹತ್ಯೆ ಮಾಡುವುದನ್ನು ನಾನು ನೋಡಿದ್ದೇನೆಂದು ಹೇಳಿಕೆ ನೀಡಿದ್ದರು. ಆದರೆ, ಭಾರತ ಸರ್ಕಾರ ಇದನ್ನು ಅಲ್ಲಗೆಳೆದಿತ್ತು. ಮಸೀಹ್ ಹೇಳುತ್ತಿರುವುದು ಕಟ್ಟು ಕತೆ. ತಾನು ಬಾಂಗ್ಲಾದೇಶ ಮುಸ್ಲಿಂ ಎಂದು ಸುಳ್ಳು ಹೇಳಿ ಮಸೀಹ್ ತಪ್ಪಿಸಿಕೊಂಡಿದ್ದರು ಎಂದು ಸುಷ್ಮಾ ಪ್ರತಿಕ್ರಿಯೆ ನೀಡಿದ್ದರು. 
SCROLL FOR NEXT