ಮುಂಬೈ ದಾಳಿಯ ಬಗ್ಗೆ ನವಾಜ್ ಷರೀಫ್ ಹೇಳಿಕೆ: ಉನ್ನತ ಮಟ್ಟದ ಸಭೆ ಕರೆದ ಪಾಕ್ ಸೇನೆ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದನ್ನು ಒಪ್ಪಿಕೊಂಡಿರುವ ಹೇಳಿಕೆ ನೀಡಿರುವ ಬೆನ್ನಲ್ಲೇ ಪಾಕಿಸ್ತಾನದ ಸೇನೆ ಉನ್ನತ ಮಟ್ಟದ ಸಭೆ ಕರೆದಿದೆ.
ಪಾಕ್ ಪ್ರಧಾನಿಯ ಮಾಧ್ಯಮ ಹೇಳಿಕೆಯ ದಾರಿತಪ್ಪಿಸುವ ಹೇಳಿಕೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಉಗ್ರವಾದಿಗಳು ಗಡಿ ದಾಟಲು ಅವಕಾಶ ನೀಡಿ ಮುಂಬೈ ನಲ್ಲಿ ದಾಳಿ ನಡೆಸಲು ಅವಕಾಶ ನೀಡಿದ್ದನ್ನು ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಶ್ನಿಸಿದ್ದರು. ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ನವಾಜ್ ಷರೀಫ್ ಮುಂಬೈ ದಾಳಿಯಲ್ಲಿ ಪಾಕ್ ನ ಕೈ ವಾಡ ಇರುವುದನ್ನು ಒಪ್ಪಿಕೊಂಡಿದ್ದರು ಅಷ್ಟೇ ಅಲ್ಲದೇ ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿರುವುದನ್ನೂ ಒಪ್ಪಿಕೊಂಡಿದ್ದ ಪಾಕ್ ನ ಮಾಜಿ ಪ್ರಧಾನಿ ದೇಶಕ್ಕೆ ಸಂಬಂಧಪಡದೇ ಇರುವವರು ಗಡಿ ದಾಟಿ ಹೋಗಿ ನೆರೆ ರಾಷ್ಟ್ರದ ಮೇಲೆ ದಾಳಿ ಮಾಡಲು ಅವಕಾಶ ನೀಡುವ ನೀತಿಯನ್ನೂ ಪ್ರಶ್ನಿಸಿದ್ದರು.
ಸೇನೆಯ ಉನ್ನತ ಮಟ್ಟದ ಸಭೆಯ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಘಫೂರ್, ಪ್ರಧಾನಿ ಶಾಶಿಕ್ ಖಕನ್ ಅಬ್ಬಾಸಿ ಸೇನೆಯ ಉನ್ನತ ಮಟ್ಟದ ಸಭೆ ನಡೆಸಲು ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಮುಂಬೈ ದಾಳಿಯ ಬಗ್ಗೆ ದಾರಿ ತಪ್ಪಿಸುವ ಹೇಳಿಕೆಯ ಬಗ್ಗೆಯೂ ಚರ್ಚಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.