ಕೊಲಂಬೊ: ಶ್ರೀಲಂಕಾ ಸಂಸತ್ ವಿಸರ್ಜನೆಗೆ ಲಂಕಾ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದ್ದು, ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರಿಗೆ ಭಾರಿ ಹಿನ್ನಡೆಯಾಗಿದೆ.
ಲಂಕಾ ರಾಜಕೀಯ ಬಿಕ್ಕಟ್ಟು ಇಂದು ಹೊಸ ತಿರುವು ಪಡೆದುಕೊಂಡಿದ್ದು, ಅವಧಿಗಿಂತ ಮೊದಲೈ ಸಂಸತ್ತನ್ನು ವಿಸರ್ಜಿಸಿದ್ದ ಮೈತ್ರಿಪಾಲ್ ಸಿರಿಸೇನಾ ಅವರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಸಂಸತ್ ವಿಸರ್ಜನೆ ಪ್ರಶ್ನಿಸಿ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತಾಂತ್ರಿಕ ಕಾರಣಗಳಿಂದಾಗಿ ಶ್ರೀಲಂಕಾ ಅಧ್ಯಕ್ಷ ನಿರ್ಧಾರಕ್ಕೆ ತಡೆ ನೀಡಲಾಗಿದೆ ಎಂದು ತಿಳಿಸಿದೆ.
ಮೈತ್ರಿಪಾಲ್ ಸಿರಿಸೇನಾ ಅವರು ನವೆಂಬರ್ 9ರಂದು ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿದ್ದರು.
ಅಕ್ಟೋಬರ್ 26ರಂದು ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಪ್ರಧಾನಿ ಹುದ್ದೆಗೆ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ನೇಮಕ ಮಾಡಿದ್ದರು. ಆದರೆ ಮಹಿಂದ ರಾಜಪಕ್ಸೆ ಬಹುಮತ ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಲಂಕಾ ಸಂಸತ್ತನ್ನು ವಿಸರ್ಜಿಸಿದ್ದರು.