ಕೊಲಂಬೊ: ಮಹಿಂದಾ ರಾಜಪಕ್ಷ ನೇತೃತ್ವದ ಸರ್ಕಾರದ ವಿರುದ್ಧ ಬುಧವಾರ ಅವಿಶ್ವಾಸ ನಿರ್ಣಯ ಅಂಗೀಕಾರವಾಗಿದ್ದು, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಭಾರೀ ಮುಖಭಂಗವಾಗಿದೆ.
ಕಳೆದ ತಿಂಗಳು 26ರಂದು ಅಧ್ಯಕ್ಷ ಸಿರಿಸೇನಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿದ್ದರು. ಆ ಬಳಿಕ ಇಂದು ಮೊದಲ ಬಾರಿ ಸೇರಿದ ಸದಸ್ಯರು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಇದರಿಂದ ಸರ್ಕಾರದ ಆಡಳಿತ ಇನ್ನಷ್ಟು ಕಗ್ಗಂಟಾಗಿದೆ.
225 ಸದಸ್ಯ ಬಲದ ಶ್ರೀಲಂಕಾ ಸಂಸತ್ತಿನಲ್ಲಿ ಬಹುತೇಕ ಸದಸ್ಯರು ರಾಜಪಕ್ಷ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದ್ದಾರೆ ಎಂದು ಸ್ಪೀಕರ್ ಕಾರು ಜಯಸೂರ್ಯ ಘೋಷಿಸಿದ್ದಾರೆ. ಮಹಿಂದಾ ರಾಜಪಕ್ಷ ಅವರನ್ನು ಪ್ರಧಾನಿಯಾಗಿ ಅಧ್ಯಕ್ಷ ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನು ನೇಮಕ ಮಾಡಿದ್ದರು.
ಧ್ವನಿಮತದ ಮೂಲಕ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲಾಗಿದ್ದು, ಸರ್ಕಾರದ ಪರ ಬಹುಮತವಿಲ್ಲ ಎಂದು ಜಯಸೂರ್ಯ ಸಂಸತ್ತಿನಲ್ಲಿ ಘೋಷಿಸಿದರು. ನಂತರ ಕಲಾಪವನ್ನು ನಾಳೆಗೆ ಮುಂದೂಡಿದರು.
ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ(ಯುಎನ್ ಪಿ)ಯ ಉಪ ನಾಯಕ ಸಾಜಿತ್ ಪ್ರೇಮದಾಸ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಬಹುಮತ ಪರೀಕ್ಷೆಯಲ್ಲಿ ವಿಫಲವಾಗಿದೆ ಎಂದು ತಿಳಿಸಿದರು. ಪ್ರಧಾನಿ ಮಹಿಂದಾ ರಾಜಪಕ್ಷ ಇದೀಗ ಅನಿವಾರ್ಯವಾಗಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲೇಬೇಕಾಗಿದೆ.
ಸಂಸತ್ತನ್ನು ವಿಸರ್ಜಿಸಿದ ಅಧ್ಯಕ್ಷ ಸಿರಿಸೇನಾ ಅವರ ವಿವಾದಿತ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಿನ್ನೆ ಅನೂರ್ಜಿತಗೊಳಿಸಿ ಜನವರಿ 5ರಂದು ನಡೆಸಲು ಉದ್ದೇಶಿಸಿದ್ದ ಕ್ಷಿಪ್ರ ಚುನಾವಣೆಯನ್ನು ಸ್ಥಗಿತಗೊಳಿಸಿ ಸಂಸತ್ತನ್ನು ವಿಸರ್ಜಿಸುವಂತೆ ತೀರ್ಪು ನೀಡಿತ್ತು. ಈ ಸಂಬಂಧ ಇಂದು ತುರ್ತು ಅಧಿವೇಶನ ಕರೆಯಲಾಗಿತ್ತು.
ಸುಪ್ರೀಂ ಕೋರ್ಟ್ ನಿನ್ನೆ ನೀಡಿದ್ದ ತೀರ್ಪಿನಲ್ಲಿ, ಸಿರಿಸೇನಾ ಅವರ ನೇತೃತ್ವದ ಸರ್ಕಾರವನ್ನು ಡಿಸೆಂಬರ್ 7ರವರೆಗೆ ಅಮಾನತ್ತಿನಲ್ಲಿಡಲಾಗುತ್ತದೆ. ಅಧ್ಯಕ್ಷರ ನಿರ್ಣಯದ ಮೇಲೆ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಮುಂದಿನ ತಿಂಗಳು ಪರಿಗಣಿಸಿ ಅಂತಿಮ ತೀರ್ಪು ನೀಡಲಾಗುವುದು ಎಂದು ಹೇಳಿದೆ.