ಚೀನಿಯರಿಂದ ಆರ್ಥಿಕ ನೆರವು ಸಂಗ್ರಹ ಕಾರ್ಯ
ಬೀಜಿಂಗ್: ಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲಿನ ಉಗ್ರ ದಾಳಿ ಕೃತ್ಯದಲ್ಲಿ ಸಾವಿಗೀಡಾದ ಪಾಕಿಸ್ತಾನ ಪೊಲೀಸರಿಗೆ ಚೀನಾ ನಾಗರಿಕರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು.. ನವೆಂಬರ್ 23ರಂದು ಕರಾಚಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೇಲೆ ಶಸ್ತ್ರಧಾರಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಪೊಲೀಸರು ಸೇರಿ ಐವರು ಸಾವನ್ನಪ್ಪಿದ್ದರು. ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ದಾಳಿಗೆ ದಿಟ್ಟ ಉತ್ತರ ನೀಡಿ ಘಟನೆಯಲ್ಲಿ ಚೀನಾ ರಾಯಭಾರ ಕಚೇರಿ ಅಧಿಕಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ತಡೆದಿದ್ದರು.
ಇದೀಗ ಪಾಕ್ ಪೊಲೀಸರ ಕರ್ತವ್ಯ ನಿಷ್ಠೆಗೆ ಶಹಬ್ಬಾಸ್ ಎಂದಿರುವ ಚೀನಿಯರು ಮೃತ ಪೊಲೀಸರ ಕುಟುಂಬಕ್ಕಾಗಿ ಧನ ಸಹಾಯ ಮಾಡುವ ಮೂಲಕ ತಮ್ಮ ಕೃತಜ್ಞತೆ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌದರಿ, ಚೀನಿ ಪ್ರಜೆಗಳ ಈ ಕಾರ್ಯ ಪಾಕಿಸ್ತಾನ ಮತ್ತು ಚೀನಾ ನಡುವಿನ ಸ್ನೇಹವನ್ನು ಬಿಂಬಿಸುತ್ತದೆ. ಕೇವಲ ಬಾಯಿ ಮಾತಿಗೆ ಸ್ನೇಹ ಎನ್ನುವ ಬದಲು ಚೀನಿಯರು ಭದ್ರತಾ ಸಿಬ್ಬಂದಿಗಳಿಗೆ ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಚೀನಾ ರಾಯಭಾರ ಕಚೇರಿ ಅಧಿಕಾರಿ ಲಿಜಿಯನ್ ಝಾವೋ ಅವರು ತಮ್ಮ ಟ್ವಿಟರ್ ಖಾತೆಗೆ ಪಾಕ್ ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಫೋಟೋ ಅಪ್ಲೋಡ್ ಮಾಡುವ ಮೂಲಕ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.