ವಿದೇಶ

ಇಸ್ಲಾಮಾಬಾದ್ ಸಾರ್ಕ್ ಶೃಂಗ ಸಭೆ: ಪ್ರಧಾನಿ ಮೋದಿಗೆ ಪಾಕ್ ಆಹ್ವಾನ ಸಾಧ್ಯತೆ

Lingaraj Badiger
ಇಸ್ಲಾಮಾಬಾದ್: ದಕ್ಷಿಣ ಏಷ್ಯ ಪ್ರಾದೇಶಿಕ ಸಹಕಾರ ಸಂಸ್ಥೆ( ಸಾರ್ಕ್)ಯ ಶೃಂಗ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಡಾ.ಮೊಹಮ್ಮದ್ ಫೈಸಾಲ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಇಸ್ಲಾಮಾಬಾದ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಫೈಸಾಲ್ ಅವರು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಮೊದಲ ಭಾಷಣದಲ್ಲಿ ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕ್ ಎರಡು ಹೆಜ್ಜೆ ಮುಂದಿಡಲಿದೆ ಎಂಬ ಹೇಳಿಕೆಯನ್ನು ನೆನಪಿಸಿಕೊಂಡರು.
ಸಾರ್ಕ್ ಶೃಂಗಸಭೆಗಾಗಿ ಪ್ರಧಾನಿ ಮೋದಿ ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲಾಗುವುದು ಎಂದು ಫೈಸಾಲ್ ಹೇಳಿರುವುದಾಗಿ ಡಾನ್ ನ್ಯೂಸ್ ಪೇಪರ್ ವರದಿ ಮಾಡಿದೆ.
ಕಳೆದ ಸಾರ್ಕ್ ಶೃಂಗಸಭೆ 2014ರಲ್ಲಿ ನೇಪಾಳದ ಕಠ್ಣಂಡುವಿನಲ್ಲಿ ನಡೆದಿತ್ತು. ಈ ವೇಳೆ ಪ್ರಧಾನಿ ಮೋದಿ ಸಹ ಭಾಗವಹಿಸಿದ್ದರು. 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ಉಗ್ರ ದಾಳಿ ನಂತರ ಭಾರತ ಸಾರ್ಕ್ ಶೃಂಗ ಸಭೆಯನ್ನು ಬಹಿಷ್ಕರಿಸಿತ್ತು. ಭಾರತದ ನಿರ್ಧಾರಕ್ಕೆ ಸದಸ್ಯ ರಾಷ್ಟ್ರಗಳಾದ ಬಾಂಗ್ರಾದೇಶ, ಭೂತಾನ್ ಮತ್ತು ಅಘ್ಘಾನಿಸ್ತಾನ ಸಹ ಬೆಂಬಲ ಸೂಚಿಸಿದ್ದವು. ಹೀಗಾಗಿ ಪಾಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 19ನೇ ಸಾರ್ಕ್ ಶೃಂಗ ಸಭೆ ಮುಂದೂಡಿಕೆಯಾಗಿತ್ತು.
SCROLL FOR NEXT