ವಿದೇಶ

ಇಸ್ತಾನ್ ಬುಲ್‌ ದೂತಾವಾಸದಲ್ಲೇ ಪತ್ರಕರ್ತ ಖಶೋಗಿ ಕೊಲೆ: ಕೊನೆಗೂ ಒಪ್ಪಿಕೊಂಡ ಸೌದಿ ಸರ್ಕಾರ

Srinivasamurthy VN
ರಿಯಾದ್: ಸರ್ಕಾರದ ಪ್ರಬಲ ಟೀಕಾಕಾರ ಎಂಬ ಹಣೆಪಟ್ಟಿ ಹೊಂದಿದ್ದ ಪತ್ರಕರ್ತ ಜಮಾಲ್ ಖಶೋಗಿ ಅವರನ್ನು ಇಸ್ತಾನ್ ಬುಲ್ ದೂತವಾಸದಲ್ಲೇ ಕೊಲೆಗೈಯ್ಯಲಾಗಿದೆ ಎಂದು ಸೌದಿ  ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ.
ಪತ್ರಕರ್ತ ಜಮಾಲ್ ಖಶೋಗಿ ನಿಗೂಢ ನಾಪತ್ತೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸೌದಿ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಖಶೋಗಿ ಹತ್ಯೆ ಕುರಿತು ಸೌದಿ ಸರ್ಕಾರ ತನ್ನ ಮೌನ ಮುರಿದಿದೆ. ಅಲ್ಲದೆ ಇಸ್ತಾನ್ ಬುಲ್ ಧೂತವಾಸದಲ್ಲೇ ಖಶೋಗಿಯನ್ನು ಕೊಲೆಗೈಯ್ಯಲಾಗಿದೆ ಎಂದು  ಸೌದಿ ಅಟಾರ್ನಿ ಜನರಲ್‌ ಶೇಖ್‌ ಸೌದ್‌ ಅಲ್‌-ಮೊಜೆಬ್‌  ಹೇಳಿದ್ದಾರೆ.
'ಇಸ್ತಾನ್ ಬುಲ್‌ನಲ್ಲಿರುವ ಸೌದಿ ದೂತಾವಾಸದಲ್ಲಿ ಖಶೋಗಿ ಮತ್ತು ಅವರನ್ನು ಭೇಟಿಯಾದ ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದು ಕೊಲೆ ನಡೆದಿದೆ ಎಂದು ಶೇಖ್‌ ಸೌದ್‌ ಅಲ್‌-ಮೊಜೆಬ್‌ ಹೇಳಿದ್ದು, ಆದರೆ ಖಶೋಗಿ ಮೃತದೇಹ ಎಲ್ಲಿದೆ ಎಂಬುದರ ಬಗ್ಗೆ ಅವರು ಮಾಹಿತಿ ನೀಡಿಲ್ಲ. 
ಸೌದಿ ಗುಪ್ತಚರ ಅಧಿಕಾರಿ ವಜಾ
ಇತ್ತ ಸೌದಿ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜಗರಕ್ಕೀಡಾಗುತ್ತಿದ್ದಂತೆಯೇ ಸೌದಿ ಆಡಳಿತವು ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಆಪ್ತರಾದ ಗುಪ್ತಚರ ವಿಭಾಗದ ಉಪಮುಖ್ಯಸ್ಥ ಅಲ್‌-ಅಸ್ಸಿರಿ ಮತ್ತು ರಾಯಲ್‌ ಕೋರ್ಟ್‌ನ ಮಾಧ್ಯಮ ಸಲಹೆಗಾರ ಸೌದ್‌ ಅಲ್‌ ಖಹ್ತಾನಿಯನ್ನು ಹುದ್ದೆಯಿಂದ ವಜಾಗೊಳಿಸಿದೆ. 
ಸೌದಿ ಅರೇಬಿಯಾದ ಸ್ನೇಹಿತ ರಾಷ್ಟ್ರ ಎಂದೇ ಗುರುತಿಸಲಾಗಿದ್ದ ಅಮೆರಿಕ ಕೂಡ ಖಶೋಗಿ ನಾಪತ್ತೆ ವಿಷಯದಲ್ಲಿ ಗಂಭೀರ ನಡೆ ಪ್ರದರ್ಶಿಸಿತ್ತು. ಪತ್ರಕರ್ತ ಖಶೋಗಿ ನಾಪತ್ತೆ ಪ್ರಕರಣವನ್ನು ಸೌದಿ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಡ ಹೇರಿತ್ತು. ಆದರೆ ಸೌದಿ ಅಧಿಕಾರಿಗಳು ಮಾತ್ರ ಖಶೋಗಿ ಬಗ್ಗೆ ಏನೂ ತಿಳಿದಿಲ್ಲ ಎಂದೇ ಹೇಳುತ್ತಿದ್ದರು. ಒಂದೊಮ್ಮೆ ಪತ್ರಕರ್ತನ ಕೊಲೆಯಾಗಿದ್ದರೆ ಕಠಿಣ ನಿರ್ಬಂಧಗಳನ್ನು ಹೇರಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿತ್ತು. ಆದರೆ, ಖಶೋಗಿ ಸಾವಿನ ಸುದ್ದಿ ಕೇಳಿದ ಬಳಿಕ ಸಂತಾಪ ಮಾತ್ರ ವ್ಯಕ್ತಪಡಿಸಿರುವ ಅಮೆರಿಕ ಸೌದಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. 
ವಾಷಿಂಗ್ಟನ್‌ ಪತ್ರಿಕೆಗೆ ಸೌದಿ ಅರೇಬಿಯಾದ ವರದಿಗಾರರಾಗಿದ್ದ ಖಶೋಗಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಕಟು ಟೀಕಾಕಾರರಾಗಿದ್ದರು. ಅಕ್ಟೋಬರ್‌ 2ರಂದು ಇಸ್ತಾನ್ ಬುಲ್‌ ರಾಯಭಾರ ಕಚೇರಿ ಪ್ರವೇಶಿಸಿದ್ದ ಬಳಿಕ ಖಶೋಗಿ ನಾಪತ್ತೆಯಾಗಿದ್ದರು.
SCROLL FOR NEXT