ವಿದೇಶ

ಟ್ರಂಪ್ ಗೆ 8 ವರ್ಷದ ಬಾಲಕನ ಪ್ರಬುದ್ಧತೆ, ಹದಿಹರೆಯದ ಯುವತಿಯ ಅಭದ್ರತೆ ಇದೆ: ಜಾನ್ ಕೆರ್ರಿ

Srinivas Rao BV
ಇರಾನ್ ಜೊತೆಗೆ ಅಕ್ರಮ ಸಭೆ ನಡೆಸುತ್ತಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಮಾಜಿ ಸಚಿವ ಜಾನ್ ಕೆರ್ರಿ ಡೊನಾಲ್ಡ್ ಟ್ರಂಪ್ 8 ವರ್ಷದ ಬಾಲಕನ ಪ್ರಬುದ್ಧತೆ ಹಾಗೂ ಹದಿಹರೆಯದ ಯುವತಿಯ ಅಭದ್ರತೆಯ ಮನಸ್ಥಿತಿ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 
ಜಾನ್ ಕೆರ್ರಿ ವಿರುದ್ಧ ಆರೋಪ ಮಾಡಿದ್ದ ಡೊನಾಲ್ಡ್ ಟ್ರಂಪ್, " ಅಮೆರಿಕದ ಮಾಜಿ ಸಚಿವ ಜಾನ್ ಕೆರ್ರಿ, ಇರಾನ್ ಜೊತೆ ಅಕ್ರಮ ಸಭೆಗಳನ್ನು ನಡೆಸುತ್ತಿದ್ದಾರೆ, ಈ ಮೂಲಕ ಅಮೆರಿಕ ಜನತೆಗೆ ಕೇಡು ಬಗೆಯುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದರು. ಟ್ರಂಪ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೆರ್ರಿ, ಅಮೆರಿಕದ ಸಂವಿಧಾನದ ಅಂಶಗಳು ಹಾಗೂ ಆಡಳಿತಾತ್ಮಕ ವಿಷಯಗಳನ್ನು ಓದುವುದಕ್ಕಿಂತ ಹೆಚ್ಚು ಸಮಯವನ್ನು ಟ್ವಿಟರ್ ನ ಲೈಕ್ ಗಳನ್ನು ನೋಡುವುದಕ್ಕೆ ವಿನಿಯೋಗಿಸುವ ಮೊದಲ ಅಧ್ಯಕ್ಷರೆಂದರೆ ಅದು ಡೊನಾಲ್ಡ್ ಟ್ರಂಪ್ ಆಗಿದ್ದಾರೆ. 8 ವರ್ಷದ ಬಾಲಕನ ಪ್ರಬುದ್ಧತೆ, ಹದಿಹರೆಯದ ಯುವತಿಯ ಅಭದ್ರತೆಯನ್ನು ಹೊಂದಿರುವ ಅಧ್ಯಕ್ಷರನ್ನು ಪಡೆದಿರುವುದು  ದುರದೃಷ್ಟಕರ ಎಂದು ಹೇಳಿದ್ದಾರೆ. 
ಇದೇ ವೇಳೆ ಕೆರ್ರಿ ಅವರ ವಕ್ತಾರರು ಕೆರ್ರಿ ಇರಾನ್ ಜೊತೆಗೆ ಸಭೆ ನಡೆಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದ ಹಿಂದಿನ ಎಲ್ಲಾ ಕಾರ್ಯದರ್ಶಿಗಳು ವಿದೇಶಗಳ ಸಚಿವರು, ಮಾಜಿ ಸಚಿವರ ಸಂಪರ್ಕದಲ್ಲಿರುವಂತೆ ಕೆರ್ರಿ ಅವರೂ ಸಂಪರ್ಕದಲ್ಲಿದ್ದಾರೆ ಇದರಲ್ಲಿ ವಿಶೇಷವೇನು ಇಲ್ಲ ಎಂದು ವಕ್ತಾರರು ಸಮರ್ಥನೆ ನೀಡಿದ್ದಾರೆ. 
SCROLL FOR NEXT