ದುಬೈ: ಬಹುಕೋಟಿ ವಿವಿಐಪಿ ಚಾಪರ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿರುವ ಬ್ರಿಟನ್ ಮೂಲದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಗಡಿಪಾರಿಗೆ ದುಬೈನ ನ್ಯಾಯಾಲಯ ಆದೇಶಿಸಿದೆ.
ಇಟಲಿ ಮೂಲದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಗಡೀಪಾರಿಗೆ ದುಬೈ ಕೋರ್ಟ್ ಆದೇಶಿಸಿದೆ. ಈ ಹಿಂದೆ ಮೈಕೆಲ್ ನನ್ನು ಕಳೆದ ವರ್ಷ ಯುಎಎಇಯಲ್ಲಿ ಬಂಧಿಸಲಾಗಿ, ಗಡೀಪಾರು ಸಂಬಂಧ ವಿಚಾರಣೆ ನಡೆಸಲಾಗುತ್ತಿತ್ತು.
ಇಟಲಿ ಮೂಲದ ಫಿನ್ ಮೆಕಾನಿಕಾ ಸಂಸ್ಥೆಯ ಬ್ರಿಟನ್ ನ ಅಂಗಸಂಸ್ಥೆಯಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯೊಂದಿಗೆ ಭಾರತದ ವಿವಿಐಪಿಗಳ ಪ್ರಯಾಣಕ್ಕೆಂದು 12 'ಎಡಬ್ಲ್ಯೂ-101' ಹೆಲಿಕಾಪ್ಟರ್ ಗಳನ್ನು ಖರೀದಿಸುವ ಒಪ್ಪಂದಕ್ಕೆ 2007ರಲ್ಲಿ ಸಹಿ ಭಾರತ ಸರ್ಕಾರ ಸಹಿ ಹಾಕಿತ್ತು. ನಂತರ ಈ ಒಪ್ಪಂದದಲ್ಲಿ ರೂ3,227 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಒಪ್ಪಂದ ಕುದುರಿಸುವ ಸಲುವಾಗಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಲಂಚ ಪಾವತಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ನಂತರ 2014ರ ಜನವರಿಯಲ್ಲಿ ಕೇಂದ್ರ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು.
ಹಗರಣಕ್ಕೆ ಸಂಬಂಧಿಸಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ಸೇರಿದಂತೆ 72 ಜನರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ತ್ಯಾಗಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.
ಅಂತೆಯೇ ಹಗರಣದ ಪ್ರಮುಖ ಮಧ್ಯವರ್ತಿಯಾಗಿರುವ ಕಾರ್ಲೊ ಗೆರೊಸಾ ಅವರನ್ನು ಭಾರತಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಇತ್ತೀಚೆಗಷ್ಟೇ ಇಟಲಿ ಸರ್ಕಾರ ಹೇಳಿತ್ತು. ಸಿಬಿಐ ಆಗ್ರಹದ ಮೇರೆಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ ನಂತರ ಇಟಲಿ ಸರ್ಕಾರ ಕಳೆದ ಅಕ್ಟೋಬರ್‍ನಲ್ಲಿ ಗೊರೊಸಾ ಅವರನ್ನು ಬಂಧಿಸಿತ್ತು. ಇದೀಗ ಪ್ರಕರಣದ ವಿಚಾರಣೆ ಕುತೂಹಲಕಾರಿ ಘಟ್ಟದಲ್ಲಿದ್ದು, ರಾಯಭಾರಿ ಹಂತದಲ್ಲಿ ಭಾರತ ಈ ಪ್ರಕರಣದ ಕುರಿತು ವ್ಯವಹರಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos