ವಿದೇಶ

ದರ ಏರಿಕೆ ವಿಚಾರ; ಕೆನಡಾ ಪ್ರಧಾನಿಯನ್ನು ಭೇಟಿ ಮಾಡಲು ನಿರಾಕರಿಸಿದ ಡೊನಾಲ್ಡ್ ಟ್ರಂಪ್

Sumana Upadhyaya

ನ್ಯೂಯಾರ್ಕ್: ಎರಡು ದೇಶಗಳ ನಡುವಿನ ವ್ಯಾಪಾರದ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಜೊತೆಗಿನ ಸಭೆಯನ್ನು ನಿರಾಕರಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅವರು ನಿನ್ನೆ ನ್ಯೂಯಾರ್ಕ್ ನಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ 73ನೇ ಶೃಂಗಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕೆನಡಾ ಮತ್ತು ಅದರ ಪ್ರತಿನಿಧಿಗಳ ಸಂಧಾನ ಶೈಲಿ ನನಗೆ ಇಷ್ಟವಾಗಲಿಲ್ಲ ಎಂದು ಹೇಳಿದರು.

ಕೆನಡಾ ಪ್ರಧಾನಿ ಜಸ್ಟಿನ್ ವಿಧಿಸಿರುವ ದರಗಳು ತುಂಬಾ ದುಬಾರಿಯಾಗಿದೆ. ಅದನ್ನು ತೆಗೆದುಹಾಕಲು ಅವರಿಗೆ ಇಷ್ಟವಿಲ್ಲ ಎಂದು ಕಾಣುತ್ತದೆ. ಹೀಗಾಗಿ ಸಂಧಾನವನ್ನು ಮರೆತುಬಿಡಿ ಎಂದು ಅವರಿಗೆ ಹೇಳಿದ್ದೇನೆ, ನನಗ್ಯಾಕೊ ಕೆನಡಾದ ಸಂಧಾನ ರಾಜಿ ಶೈಲಿ ಇಷ್ಟವಾಗುತ್ತಿಲ್ಲ, ಅವರ ಪ್ರತಿನಿಧಿಗಳನ್ನು ಸಹ ನಾವು ಹೆಚ್ಚು ಇಷ್ಟಪಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ ಎಂದು ಅಮೆರಿಕಾದ ರಾಜಕೀಯ ಪತ್ರಿಕೆ ಮತ್ತು ವೆಬ್ ಸೈಟ್ ದ ಹಿಲ್ ವರದಿ ಮಾಡಿದೆ.

ಇದಕ್ಕೆ ಕೆನಡಾ ಅಧಿಕಾರಿಗಳು ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ಅಮೆರಿಕಾ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲು ಯಾವುದೇ ಮನವಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.
ಅಮೆರಿಕಾ ಜೊತೆ ನ್ಯಾಯಯುತವಾದ ಒಪ್ಪಂದ ಮಾಡಿಕೊಳ್ಳದಿದ್ದರೆ ಉತ್ತರ ಅಮೆರಿಕಾ ಮುಕ್ತ ವ್ಯಾಪಾರ ಒಪ್ಪಂದ(ಎನ್ಎಎಫ್ ಟಿಎ)ದಿಂದ ಒಟ್ಟಾವಾವನ್ನು ತೆಗೆದುಹಾಕಲಾಗುವುದು ಎಂದು ಟ್ರಂಪ್ ಬೆದರಿಕೆಯೊಡ್ಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

SCROLL FOR NEXT