ವಿದೇಶ

ಇರಾನ್: ಭೀಕರ ಪ್ರವಾಹಕ್ಕೆ ಕನಿಷ್ಠ 70 ಬಲಿ: 80 ಸಾವಿರಕ್ಕೂ ಅಧಿಕ ಸಂತ್ರಸ್ತರ ಸ್ಥಳಾಂತರ

Srinivasamurthy VN
ಟೆಹ್ರಾನ್: ಇರಾನ್ ನಲ್ಲಿ ಸಂಭವಿಸಿದ ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರವಾಹದಲ್ಲಿ ಕನಿಷ್ಠ 70 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ನೈಋತ್ಯ ಇರಾನ್ ನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಯ ಆರ್ಭಟಕ್ಕೆ 70 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಹಳ್ಳಿಗಳು ಹಾಗೂ ಪಟ್ಟಣಗಳು ಪ್ರವಾಹಪೀಡಿತವಾಗಿವೆ. ಮೂಲಗಳ ಪ್ರಕಾರ ಸುಮಾರು 50 ಸಾವಿರ ಜನಸಂಖ್ಯೆಯಿರುವ ಈ ನಗರದ ಬಹುತೇಕ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ.  ಪ್ರಮುಖ ನದಿಗಳ ಅಣೆಕಟ್ಟುಗಳು ತುಂಬಿದ್ದು, ಅವುಗಳ ನೀರನ್ನು ಅಧಿಕಾರಿಗಳು ಹೊರಬಿಡುತ್ತಿದ್ದು, ತೈಲ ಸಮೃದ್ಧ ಪ್ರಾಂತ್ಯವಾದ ಖುಜೆಸ್ತಾನ್‌ನ ಸುಸೆನ್ ಜಾನ್ ನಗರ ಸಂಪೂರ್ಣ ಜಲಾವೃತಗೊಂಡಿದೆ.
ನೆರೆಯ ಲೊರೆಸ್ತಾನ್ ಪ್ರಾಂತದಲ್ಲೂ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದ್ದು, ಅಲ್ಲಿನ ಏಳು ಗ್ರಾಮಗಳಲ್ಲಿ ಭೂಕುಸಿತವುಂಟಾಗಿದ್ದು, ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆಯೆಂದು ಇರಾನ್ ಸರ್ಕಾರಿ ಟಿವಿ ವಾಹಿನಿ ವರದಿ ಮಾಡಿದೆ. ನೈಋತ್ಯ ಇರಾನ್ ನ ವಿವಿಧೆಡೆ ಪ್ರವಾಹದಿಂದಾಗಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದಾರೆಂದು ದೇಶದ ತುರ್ತು ಸೇವೆಗಳ ನಿರ್ವಹಣಾ ತಂಡದ ವರಿಷ್ಠ ಫಿರೋಸ್ಸೆನ್ ಕೊಯುಲಿವಾಂದ್, ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಇರ್ನಾಗೆ ತಿಳಿಸಿದ್ದಾರೆ.
ಮಾರ್ಚ್ 19ರಿಂದ ಇರಾನ್‌ ನಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿವಿಧೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಸುಮಾರು 1900 ನಗರಗಳು ಹಾಗೂ ಹಳ್ಳಿಗಳು ಜಲಾವೃತಗೊಂಡಿವೆ. ಈವರೆಗೆ ಸುಮಾರು 86 ಸಾವಿರ ಮಂದಿ ಸಂತ್ರಸ್ತರನ್ನು ತುರ್ತು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಳೆಯಿಂದ ಹಾನಿಗೀಡಾದ ಕುಟುಂಬಗಳಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಆಗಿರುವ ಎಲ್ಲಾ ನಷ್ಟಗಳಿಗೂ ಪರಿಹಾರವನ್ನು ನೀಡಲಾಗುವುದು ಎಂದು ಇರಾನ್ ಆಡಳಿತ ಈಗಾಗಲೇ ಘೋಷಿಸಿದೆ.
SCROLL FOR NEXT