ವಿದೇಶ

ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತಮ ಅವಕಾಶ: ಪಾಕ್ ಪ್ರಧಾನಿ ಇಮ್ರಾನ್ ಖಾನ್

Srinivas Rao BV
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರ ಸಮಸ್ಯೆ ಬಗೆಹರಿಸುವುದಕ್ಕೆ ಹಾಗೂ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಇರಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 
ಏ.11 ರಿಂದ ಲೋಕಸಭಾ ಚುನಾವಣೆಗೆ 7 ಹಂತದ ಮತದಾನ ಪ್ರಕ್ರಿಯೆ ಪ್ರಾರಂಭವಾಗಲಿದೆ. 
ಮತ್ತೊಮ್ಮೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಶ್ಮೀರ ವಿಷಯದಲ್ಲಿ ಬಹುಶಃ ಅಂತಿಮ ಒಪ್ಪಂದಕ್ಕೆ ಬರಬಹುದು ಎಂದು ವಿದೇಶಿ ಪತ್ರಕರ್ತರೊಂದಿಗೆ ಮಾತನಾಡಿರುವ ಇಮ್ರಾನ್ ಖಾನ್ ಹೇಳಿದ್ದಾರೆ. 
ಬೇರೆ ಪಕ್ಷದವರು ಕಾಶ್ಮೀರ ವಿಷಯವನ್ನು ಬಗೆಹರಿಸುವುದಕ್ಕೆ ಮುಂದಾದರೆ ಬಲಪಂಥೀಯರು ರೊಚ್ಚಿಗೇಳುವ ಸಾಧ್ಯತೆಯನ್ನು ಮನಗಂಡು ಹೆದರುತ್ತಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 
"ಉಭಯ ದೇಶಗಳ ನಡುವೆ ಕಾಶ್ಮೀರವೇ ಪ್ರಮುಖ ವಿಷಯವಾಗಿದೆ. ಭಾರತ ಇಡಿ ಕಾಶ್ಮೀರ ನಮ್ಮ ಅವಿಭಾಜ್ಯ ಅಂಗವಾಗಿದ್ದು ಪಾಕಿಸ್ತಾನ ಆಕ್ರಮಿಸಿಕೊಂಡಿದೆ ಎನ್ನುತ್ತಿದೆ" ಎಂದು ಇಮ್ರಾನ್ ಖಾನ್ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಹೇಳಿದ್ದಾರೆ. 
ಇದೇ ವೇಳೆ ಭಯೋತ್ಪಾದನೆಯ ಬಗ್ಗೆಯೂ ಮಾತನಾಡಿರುವ ಇಮ್ರಾನ್ ಖಾನ್, ಪಾಕಿಸ್ತಾನ ಜೈಶ್ ಸೇರಿದಂತೆ ಎಲ್ಲಾ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. 
SCROLL FOR NEXT