ವಿದೇಶ

ಸುಷ್ಮಾ ಸ್ವರಾಜ್ ಮತ್ತೊಮ್ಮೆ ಇಲ್ಲಿ ಹುಟ್ಟಿ ಬರಬೇಕು, ಹೀಗೆ ಹೇಳಿದ್ದು ಪಾಕಿಸ್ತಾನೀಯರು!

Sumana Upadhyaya
ಇಸ್ಲಾಮಾಬಾದ್: ತಾವು ಬದುಕಿದ್ದಾಗ ರಾಜಕೀಯ ಜೀವನದಲ್ಲಿ ಉಪಖಂಡಗಳ ಅನೇಕ ಮಂದಿಯನ್ನು ಒಂದು ಮಾಡಿದಂತೆ ಸಾವಿನಲ್ಲಿ ಕೂಡ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಅದರಲ್ಲೂ ಪಾಕಿಸ್ತಾನೀಯರ ಮನಸ್ಸಿನಲ್ಲಿ ಪ್ರೀತಿ ಮೂಡಿಸಿದ್ದಾರೆ.
ಪಾಕಿಸ್ತಾನದಿಂದ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ನೂರಾರು ಸಂತಾಪ ಸೂಚಕ ಸಂದೇಶಗಳು ಹರಿದುಬರುತ್ತಿವೆ. ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ತಮಗೆ ಹೇಗೆ ಸಹಾಯ ಮಾಡಿದ್ದರು ಎಂದು ಟ್ವಿಟ್ಟರ್ ನಲ್ಲಿ ಅನುಭವ ಹಂಚಿಕೊಂಡಿದ್ದಾರೆ.
ಹಿಂದಿನ ನರೇಂದ್ರ ಮೋದಿ ಸರ್ಕಾರದಲ್ಲಿ ಪೂರ್ಣಾವಧಿಗೆ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಜಾತಿ, ಧರ್ಮ ನೋಡದೆ, ಬಡವ-ಬಲ್ಲಿದ ಎಂದು ಕಾಣದೆ, ಯಾವ ದೇಶದವರು ಎಂದು ನೋಡದೆ ತಮ್ಮ ಬಳಿ ಸಹಾಯ ಕೇಳಿ ಬಂದವರಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಾಧ್ಯವಾದ ಸಹಾಯ ಮಾಡುತ್ತಿದ್ದರು. ತೊಂದರೆಯಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಸಿಲುಕಿರುವವರಿಗೆ ಟ್ವಿಟ್ಟರ್ ಸಹಾಯವಾಣಿಯನ್ನು ತೆರೆದಿದ್ದರು. ಇದರ ಮೂಲಕ ಅನೇಕರಿಗೆ ಸಹಾಯವಾಗಿತ್ತು. ಅವರ ಮಾನವೀಯ ಕೆಲಸಗಳು ವಿದೇಶಾಂಗ ಸಚಿವೆಯಾಗಿ ಅವರನ್ನು ಉತ್ತುಂಗಕ್ಕೆ ಏರಿಸಿತ್ತು, ಜನರ ಪ್ರೀತಿಗೆ ಪಾತ್ರವಾಗಿದ್ದರು.
ಹಲವು ಪಾಕಿಸ್ತಾನಿಯರಿಗೆ ಭಾರತಕ್ಕೆ ಬಂದು ಚಿಕಿತ್ಸೆ ಪಡೆಯಲು ವೀಸಾ ಸೌಲಭ್ಯ ಮಾಡಿಕೊಟ್ಟಿದ್ದರು. ಇದಕ್ಕೆ ಟ್ವೀಟ್ ಮೂಲಕ ಪಾಕಿಸ್ತಾನಿಯರು ಅಗಲಿದ ನಾಯಕಿಗೆ ಗೌರವ ಸೂಚಿಸಿದ್ದಾರೆ.
ಪಾಕಿಸ್ತಾನದ ಫಿಯಾತ್ ಎಂಬ ಮಹಿಳೆ ಉಕ್ಕಿನ ಮಹಿಳೆ ಸುಷ್ಮಾ ಸ್ವರಾಜ್ ನಿಧನ ಸುದ್ದಿ ಕೇಳಿ ಆಘಾತವಾಯಿತು, ಹಲವು ಪಾಕಿಸ್ತಾನಿಯರಿಗೆ ಅವರು ಸಹಾಯ ಮಾಡಿದ್ದರು. ಯಾರಾದರೂ ಪಾಕಿಸ್ತಾನಿಯರು ಅವರ ನಿಧನಕ್ಕೆ ಖುಷಿಪಟ್ಟರೆ ನಿಜಕ್ಕೂ ಅದು ಹೇಯಕೃತ್ಯ, ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮುಸ್ಲಿಮರಲ್ಲಿ ಇನ್ನೊಂದು ಜನ್ಮವಿದೆ ಎಂಬುದನ್ನು ನಂಬುವುದಿಲ್ಲ. ಆದರೂ ಮತ್ತೊಂದು ಜನ್ಮವೆಂಬುದು ಇದ್ದರೆ ಸುಷ್ಮಾ ಸ್ವರಾಜ್ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ, ಇಲ್ಲಿನ ರಾಜಕೀಯ ವ್ಯಕ್ತಿಯಾಗಲಿ ಎಂದು ಆಶಿಸುತ್ತೇನೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಜಮ್ಮು-ಕಾಶ್ಮೀರ ವಿಚಾರದಲ್ಲಿ ಸುಷ್ಮಾ ಸ್ವರಾಜ್ ಅವರು ಮಾಡಿದ್ದ ಕೊನೆಯ ಟ್ವೀಟ್ ನ್ನು ದೇವರು ಓದುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
SCROLL FOR NEXT