ವಿದೇಶ

ಸುಷ್ಮಾ ಸ್ವರಾಜ್ ಸ್ಮರಣಾರ್ಥ ಸಾವಿರ ದೀಪ ಬೆಳಗಿಸಿದ ಭೂತಾನ್ ದೊರೆ!

Srinivasamurthy VN

ಥಿಂಪು: ಇತ್ತೀಚೆಗಷ್ಟೇ ಅಗಲಿದ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಮರಣಾರ್ಥ ಭೂತಾನ್ ದೊರೆ ಸ್ಥಳೀಯ ದೇಗುಲದಲ್ಲಿ ಒಂದು ಸಾವಿರ ದೀಪ ಬೆಳಗಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಭೂತಾನ್ ನ ದೊರೆ ಜಿಗ್ಮೆ ಕೇಸರ್ ನಾಮ್ಗೇಲ್ ವಾಂಗ್‌ಚುಕ್ ಅವರು ಸಿಂತೋಖಾ ಜೋಂಗ್ ಬೌದ್ಧ ದೇವಾಲಯದಲ್ಲಿ ಒಂದು ಸಾವಿರ ಬೆಣ್ಣೆ ದೀಪಗಳನ್ನು ಬೆಳಗಿಸುವ ಮೂಲಕ ಇತ್ತೀಚೆಗಷ್ಟೇ ನಿಧನ ಹೊಂದಿದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. 

ಈ ಕುರಿತಂತೆ ಭೂತಾನ್ ರೇಡಿಯೋ ಕೂಡ ವರದಿ ಮಾಡಿದ್ದು, 'ಭೂತಾನ್ ದೊರೆ ಜಿಗ್ಮೆ ಕೇಸರ್ ಭಾರತದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಸ್ಮರಣಾರ್ಥವಾಗಿ ಸಿಂತೋಖಾ ಜೊಂಗ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಒಂದು ಸಾವಿರ ಬೆಣ್ಣೆ ದೀಪಗಳನ್ನು ಬೆಳಗಿಸಿದರು ಎಂದು ಸುದ್ದಿ ಪ್ರಸಾರ ಮಾಡಿದೆ. ಅಲ್ಲದೆ ದೊರೆಯ ಈ ಕಾರ್ಯ ಭಾರತ ಮತ್ತು ಭೂತಾನ್ ದೇಶಗಳ ನಡುವಿನ ಸೌಹಾರ್ಧ ಮತ್ತು ಆತ್ಮೀಯ ಸಂಬಂಧವನ್ನು ಬಿಂಬಿಸುತ್ತದೆ. ಇದು ಭಾರತ ಹಾಗೂ ಭೂತಾನ್ ನ ಬಲವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದೆ.

ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಭೂತಾನ್ ದೊರೆ ಜಿಗ್ಮೆ ಕೇಸರ್ ನಾಮ್ಗೇಲ್ ವಾಂಗ್‌ಚುಕ್ ಪತ್ನಿ ಮತ್ತು ಮಗು ಸಮೇತರಾಗಿ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಅಂದು ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರು ದೊರೆಗೆ ಆತ್ಮೀಯ ಆತಿಥ್ಯ ನೀಡಿದ್ದರು.

SCROLL FOR NEXT