ವಿದೇಶ

ವಿಶ್ವಸಮುದಾಯ ಭಾರತಕ್ಕೆ ಬೆಂಬಲ ನೀಡಿದರೆ ಮುಸ್ಲಿಮರು ದಂಗೆ ಏಳುತ್ತಾರೆ: ಪಾಕ್ ಪ್ರಧಾನಿಯ ಉದ್ಧಟತನ

Srinivasamurthy VN

ಇಸ್ಲಾಮಾಬಾದ್: ಕಾಶ್ಮೀರ ವಿಚಾರವಾಗಿ ವಿಶ್ವಸಮುದಾಯ ಭಾರತದ ಪರ ನಿಂತರೆ ಖಂಡಿತ ಜಗತ್ತಿನಾದ್ಯಂತ ಇರುವ ಮುಸ್ಲಿಮರು ದಂಗೆ ಏಳುತ್ತಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.

ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ನ್ನು ರದ್ದುಗೊಳಿಸಿ ಅದನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡುತ್ತಲೇ ತನ್ನ ಕೈಯಿಂದ ಕಾಶ್ಮೀರ ಕೈ ತಪ್ಪಿ ಹೋಯಿತು ಎಂದು ಪಾಕಿಸ್ತಾನ ಕೈಕೈ ಹಿಸುಕುಕೊಳ್ಳುತ್ತಿದೆ. ಇದೇ ಕಾರಣಕ್ಕೆ ಅವಕಾಶ ಸಿಕ್ಕಾಗಲೆಲ್ಲ ಭಾರತದ ವಿರುದ್ಧ ಪಾಕಿಸ್ತಾನಿ ರಾಜಕೀಯ ಮುಖಂಡರು ಕಿಡಿಕಾರುತ್ತಲೇ ಇದ್ದಾರೆ. 

ಈ ಹಿಂದೆಯೂ ಕೂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಆ ದೇಶದ ಹಲವು ಪ್ರಮುಖ ರಾಜಕಾರಣಿಗಳು ಮತ್ತು ಸಚಿವರು ಭಾರತದ ವಿರುದ್ಧ ಕಿಡಿಕಾರಿದ್ದರು. ಆದರೆ ಇದೀಗ ಅದೇ ಮಾದರಿಯ ಟೀಕೆಗಳನ್ನು ಮುಂದುವರೆಸಿರುವ ಪಾಕಿಸ್ತಾನದ ಪ್ರಧಾನಿ ತಮ್ಮ ನಾಲಿಗೆಯನ್ನು ಹರಿಯ ಬಿಟ್ಟಿದ್ದು, ಈ ಬಾರಿ ತಮ್ಮ ಸ್ವಾರ್ಥದ ರಾಜಕಾರಣಕ್ಕೆ ಧರ್ಮ ಮತ್ತು ಮುಸ್ಲಿಮರನ್ನು ಎಳೆದುತಂದಿದ್ದಾರೆ.

ಭಾರತ ಗುರುವಾರ ತನ್ನ 73ನೇ ಸ್ವಾಂತತ್ರ್ಯೋತ್ಸವವನ್ನು ಆಚರಿಸಿದ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಟ್ಟಿಟ್ಟರ್‌ನಲ್ಲಿ ಭಾರತದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದು, 'ಜಮ್ಮು–ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯಗಳು ಭಾರತಕ್ಕೆ ಬೆಂಬಲಿಸಿದರೆ, ಮುಸ್ಲೀಮರು ದಂಗೆ ಏಳಬೇಕಾಗುತ್ತದೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ವಿಶ್ವಸಮುದಾಯದ ಏಕಪಕ್ಷೀಯ ನಡೆ ಮುಸ್ಲಿಂ ತೀವ್ರಗಾಮಿ ತನ, ಹಿಂಸೆ ಸೇರಿ ಅನೇಕ ಪರಿಣಾಮಗಳನ್ನು ಇತರೆ ದೇಶಗಳು ಎದುರಿಸಬೇಕಾಗುತ್ತದೆ  ಎಂದೂ ಬೆದರಿಕೆಯೊಡ್ಡಿದ್ದಾರೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಈಗಿನ ಪರಿಸ್ಥಿತಿಯನ್ನು 1995ರ ಸ್ರೆಬ್ರೆನಿಕಾ ಹತ್ಯಾಕಾಂಡಕ್ಕೆ ಹೋಲಿಸಿದ ಅವರು, 'ಭಾರತದ ವಿರುದ್ಧ ವಿಶ್ವ ಒಂದಾಗಬೇಕು. ಅದು ತನ್ನ ನಡೆಯಿಂದ ಹಿಂದೆ ಸರಿಯುವಂತೆ ಒತ್ತಡ ಹೇರಬೇಕು' ಎಂದು ಒತ್ತಾಯಿಸಿದ್ದಾರೆ.

'ಭಾರತ ಆಕ್ರಮಿತ ಕಾಶ್ಮೀರದಲ್ಲಿ (ಐಒಕೆ) ಕಳೆದ 12 ದಿನಗಳಿಂದ ಕರ್ಫ್ಯೂ ಜಾರಿಯಲ್ಲಿದೆ. ಜೊತೆಗೆ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಆರ್‌ಎಸ್‌ಎಸ್‌ ಗೂಂಡಾಗಳನ್ನು ಅಲ್ಲಿಗೆ ಕಳಿಸಲಾಗುತ್ತಿದೆ. ಸಂವಹನದ ಎಲ್ಲಾ ಹಾದಿಗಳನ್ನೂ ಮುಚ್ಚಲಾಗಿದೆ. ಈ ಜಗತ್ತು ಇನ್ನೊಂದು ಹತ್ಯಾಕಾಂಡವನ್ನು ಮೌನವಾಗಿಯೇ ವೀಕ್ಷಿಸಲು ಕಾದು ಕುಳಿತಿದೆಯೇ? ಹಾಗೇನಾದರೂ ಆದರೆ, ಮುಸ್ಲೀಮರ ತೀವ್ರ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ’ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಸಿಡಿದೆದ್ದ ಪಾಕಿಸ್ತಾನಕ್ಕೆ ಯಾರ ಬೆಂಬಲವೂ ಸಿಗಲಿಲ್ಲ. ಇತ್ತೀಚೆಗೆ ರಷ್ಯಾ ಮತ್ತು ಅಮೆರಿಕ ದೇಶಗಳು ಈ ಸಂಬಂಧ ಭಾರತಕ್ಕೆ ಪರೋಕ್ಷ ಬೆಂಬಲ ನೀಡಿದ್ದವು. ವಿಶ್ವಸಂಸ್ಥೆ ಕೂಡ ಈ ಸಂಬಂಧ ಪಾಕಿಸ್ತಾನ ಸಲ್ಲಿಸಿದ್ದ ಅರ್ಜಿ ಕುರಿತು ನಿರ್ಲಕ್ಷ್ಯತೆ ತೋರಿತ್ತು. ಹೀಗಾಗಿ ಕಾಶ್ಮೀರ ವಿಚಾರವಾಗಿ ತಮಗೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಸಿಗುವುದಿಲ್ಲ ಎಂಬುದು ಖಾತರಿಯಾಗುತ್ತಲೇ ಪಾಕಿಸ್ತಾನದ ನಾಯಕರು ಇದೀಗ ಧರ್ಮ ಮತ್ತು ಮುಸ್ಲಿಮರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಹವಣಿಸುತ್ತಿದ್ದಾರೆ.

SCROLL FOR NEXT