ವಿದೇಶ

ಕಾಶ್ಮೀರ ವಿಮೋಚನಾ ಹೋರಾಟ ಹತ್ತಿಕ್ಕುವ ಮೋದಿ ಸರ್ಕಾರದ ಫ್ಯಾಸಿಸ್ಟ್ ತಂತ್ರ ವಿಫಲವಾಗಲಿದೆ: ಇಮ್ರಾನ್ ಖಾನ್

Sumana Upadhyaya

ಇಸ್ಲಾಮಾಬಾದ್: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಮತ್ತೊಮ್ಮೆ ಹರಿಹಾಯ್ದಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370ನ್ನು ತೆಗೆದುಹಾಕಿರುವುದು ಉಗ್ರಗಾಮಿ ಕ್ರಮ ಎಂದು ಆರೋಪಿಸಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಅವರು, ಫ್ಯಾಸಿಸ್ಟ್(ಉಗ್ರ ಬಲಪಂಥೀಯ), ಹಿಂದೂ ಸರ್ವೋತ್ತಮವಾದಿ ಮೋದಿ ಸರ್ಕಾರವು ಸೈನ್ಯಗಳು, ಉಗ್ರಗಾಮಿಗಳು ಮತ್ತು ಭಯೋತ್ಪಾದಕರನ್ನು ಉನ್ನತ ಶಕ್ತಿಗಳಿಂದ ಸೋಲಿಸಬಹುದು ಎಂದು ಭಾವಿಸುವುದಾದರೆ, ಒಂದು ರಾಷ್ಟ್ರದ ಜನರು ಸಾವಿಗೆ ಹೆದರದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಗ್ಗೂಡಿದಾಗ ಅವರನ್ನು ಯಾವುದೇ ಶಕ್ತಿಯು ತಮ್ಮ ಗುರಿ ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಇತಿಹಾಸ ಹೇಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟೀಕಿಸಿದ್ದಾರೆ.

ಕಾಶ್ಮೀರ ಮುಕ್ತಿ ಹೋರಾಟವನ್ನು ಹತ್ತಿಕ್ಕುವ ಯತ್ನದಲ್ಲಿ ಭಾರತ ಆಕ್ರಮಿತ ಕಾಶ್ಮೀರದಲ್ಲಿ(IoK) ಮೋದಿ ಸರ್ಕಾರದ ಫ್ಯಾಸಿಸ್ಟ್ ತಂತ್ರ ವಿಫಲವಾಗಲಿದೆ ಎಂದು ಕೂಡ ಇಮ್ರಾನ್ ಖಾನ್ ಟೀಕಿಸಿದ್ದಾರೆ.

ಸಂವಿಧಾನ ವಿಧಿ 370 ರದ್ದು ಮಾಡುವುದಾಗಿ ಕಳೆದ 5ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದರು. ಅದಕ್ಕೆ ರಾಷ್ಟ್ರಪತಿಗಳ ಅಂಕಿತ ಕೂಡ ಸಿಕ್ಕಿದೆ. ಅದಾದ ಬಳಿಕ ಕಾಶ್ಮೀರದಲ್ಲಿನ ನಾಗರಿಕರ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. 


ಈ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಜನರ ಸಂಚಾರಕ್ಕೆ ವಿಧಿಸಲಾಗಿದ್ದ ತಡೆಯನ್ನು ಸಡಿಲಗೊಳಿಸಿದ್ದು ಜನರು ತಮ್ಮ ನಿತ್ಯ ಕೆಲಸಗಳಿಗೆ ಹೋಗುವಂತೆ ರೇಡಿಯೋ ಘೋಷಣೆ ಮೂಲಕ ಜಿಲ್ಲಾಡಳಿತ ಘೋಷಿಸಿದೆ.

SCROLL FOR NEXT