ವಿದೇಶ

ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆ; ಅಮೆರಿಕಾದಿಂದ ಬರಬೇಕಿದ್ದ 440 ಮಿ.ಡಾಲರ್ ಆರ್ಥಿಕ ನೆರವು ಕಡಿತ 

Sumana Upadhyaya

ವಾಷಿಂಗ್ಟನ್: ಪಾಕಿಸ್ತಾನಕ್ಕೆ ಮತ್ತೊಂದು ವಿಷಯದಲ್ಲಿ ತೀವ್ರ ಮುಖಭಂಗ ಮತ್ತು ಹಿನ್ನಡೆಯಾಗಿದ್ದು ಅಲ್ಲಿಗೆ 440 ಮಿಲಿಯನ್ ಡಾಲರ್ ನೆರವು ನೀಡಲು ಉದ್ದೇಶಿಸಿದ್ದ ಅಮೆರಿಕಾ ತನ್ನ ನಿರ್ಧಾರದಿಂದ ಹಿಂದೆ ಸರಿದು ಕೇವಲ 4.1 ಶತಕೋಟಿ ಡಾಲರ್ ಗಳಷ್ಟು ಮಾತ್ರ ನೆರವನ್ನು ನೀಡಿದೆ.


ಈ ಸಹಾಯಧನವನ್ನು ಪಾಕಿಸ್ತಾನ ವಿಸ್ತರಣೆ ಸಹಭಾಗಿತ್ವ ಒಪ್ಪಂದ, ಪೇಪಾ(PEPA) 2010ರಡಿಯಲ್ಲಿ ನೀಡಲಾಗಿದೆ ಎಂದು ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.


ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತೊಂದು ಅಮೆರಿಕಾಕ್ಕೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿದ್ದು ಇದಕ್ಕೂ ಮುನ್ನ ಅಮೆರಿಕಾದಿಂದ ಈ ಆಘಾತಕಾರಿ ವಿಷಯ ಪಾಕ್ ಗೆ ಮುಟ್ಟಿದೆ. 


ಐದು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನಕ್ಕೆ 7.5 ಶತಕೋಟಿ ಡಾಲರ್ ನೆರವು ನೀಡಲು 2009ರ ಅಕ್ಟೋಬರ್ ನಲ್ಲಿ ಅಮೆರಿಕಾ ಕಾಂಗ್ರೆಸ್ ಹೊರಡಿಸಿದ್ದ ಕೆರ್ರಿ ಲುಗರ್ ಬರ್ಮನ್(ಕೆಎಲ್ ಬಿ) ಕಾಯ್ದೆ ಕಾರ್ಯನಿರ್ವಹಿಸಲು ಪೇಪಾವನ್ನು ಸೆಪ್ಟೆಂಬರ್ 2010ರಲ್ಲಿ ಸಹಿ ಮಾಡಲಾಗಿತ್ತು. ಈ ಹಿಂದೆ ಪಾಕಿಸ್ತಾನಕ್ಕೆ ಈ ಕೆಎಲ್ ಬಿ ಕಾಯ್ದೆಯಡಿ 4.5 ಶತಕೋಟಿ ನೆರವನ್ನು ಅಮೆರಿಕಾ ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಈ ಬಾರಿ ಅದನ್ನು ಕಡಿತಗೊಳಿಸಿ ಇದೀಗ 4.1 ಶತಕೋಟಿಯಷ್ಟು ನೀಡಿದೆ.


ಪಾಕಿಸ್ತಾನ ಭಯೋತ್ಪಾದನೆ ನಿಗ್ರಹಿಸಲು ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ, ಅದು ಭಯೋತ್ಪಾದಕರ ಮೇಲೆ ಮೃದು ಧೋರಣೆ ತಳೆಯುತ್ತಿದೆ ಎಂದು ನೊಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಮೆರಿಕಾದ ಮಿಲಿಟರಿ, ಪಾಕಿಸ್ತಾನಕ್ಕೆ ನೀಡಲು ಉದ್ದೇಶಿಸಿದ್ದ 300 ಮಿಲಿಯನ್ ಡಾಲರ್ ಹಣಕಾಸು ನೆರವನ್ನು ರದ್ದುಗೊಳಿಸಿತ್ತು. ಅದಕ್ಕೂ ಮೊದಲು ಜನವರಿಯಲ್ಲಿ ಇದೇ ಕಾರಣ ನೀಡಿ ಪಾಕಿಸ್ತಾನಕ್ಕೆ ಅಮೆರಿಕಾ 1 ಶತಕೋಟಿ ಡಾಲರ್ ಆರ್ಥಿಕ ನೆರವು ನೀಡಲು ನಿರಾಕರಿಸಿತು ಎಂದು ವರದಿಯಾಗಿದ್ದವು. 

SCROLL FOR NEXT