ವಿದೇಶ

ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ; ಇಮ್ರಾನ್ ಖಾನ್ ಗೆ ಡೊನಾಲ್ಡ್ ಟ್ರಂಪ್ ಸಲಹೆ 

Sumana Upadhyaya

ವಾಷಿಂಗ್ಟನ್: ಗಡಿ ಭಾಗ ಜಮ್ಮು-ಕಾಶ್ಮೀರದಲ್ಲಿ ಉದ್ವಿಗ್ನ ಸ್ಥಿತಿಯನ್ನು ತಗ್ಗಿಸಲು ಭಾರತದೊಂದಿಗೆ ಮೃದು ಧೋರಣೆ ನಡೆಸುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಒತ್ತಾಯಿಸಿದ್ದಾರೆ.


ಈ ಕುರಿತು ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಅವರು, ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿಯನ್ನು ನಿವಾರಿಸಲು ಭಾರತದೊಂದಿಗೆ ಮೃದು ನಿಲುವು ತಳೆಯುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.


ಇದಕ್ಕೂ ಮುನ್ನ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಈ ವೇಳೆ ಮೋದಿಯವರು ಪಾಕಿಸ್ತಾನದ ನಾಯಕರು ಭಾರತ ವಿರೋಧಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದು ಅದು ತೀವ್ರವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.


ಪರಿಸ್ಥಿತಿಯ ಉಲ್ಬಣವನ್ನು ತಪ್ಪಿಸುವ ಅಗತ್ಯವನ್ನು ಟ್ರಂಪ್ ದೂರವಾಣಿ ಸಂಭಾಷಣೆ ವೇಳೆ ಪುನರುಚ್ಚರಿಸಿದ್ದಾರೆ. ಅಮೆರಿಕಾ-ಪಾಕಿಸ್ತಾನ ಆರ್ಥಿಕ ಮತ್ತು ಉದ್ಯಮ ಸಹಕಾರವನ್ನು ಬಲಪಡಿಸಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.


ಈ ಕುರಿತು ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್, ನನ್ನ ಉತ್ತಮ ಸ್ನೇಹಿತರಾದ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗೆ ಉದ್ಯಮ, ವ್ಯಾಪಾರ, ಕಾರ್ಯತಂತ್ರ ಸಹಭಾಗಿತ್ವ ಮತ್ತು ಕಾಶ್ಮೀರದಲ್ಲಿನ ಉದ್ವಿಗ್ನ ಸ್ಥಿತಿಗತಿಯನ್ನು ತಗ್ಗಿಸುವ ಸಂಬಂಧ ಮಾತುಕತೆ ನಡೆಸಿದೆನು, ಪರಿಸ್ಥಿತಿ ಕಷ್ಟವಾಗಿತ್ತು, ಆದರೆ ಉತ್ತಮ ಸಂಭಾಷಣೆ ನಡೆಯಿತು ಎಂದು ಬರೆದುಕೊಂಡಿದ್ದಾರೆ.

SCROLL FOR NEXT