ವಿದೇಶ

ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಜೊತೆ ಪ್ರಧಾನಿ ಮೋದಿ ವಿಸ್ತೃತ ಮಾತುಕತೆ 

Sumana Upadhyaya

ಬಿಯಾರ್ರಿಟ್ಜ್: ಫ್ರಾನ್ಸ್ ನ ಬಿಯರ್ರಿಟ್ಜ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಜೊತೆ ಫಲಪ್ರದಾಯಕ ಮಾತುಕತೆ ನಡೆಸಿದ್ದಾರೆ. 


ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಇಬ್ಬರು ನಾಯಕರು ಹಲವು ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ ರಾಜ್ಯ ವಿಭಜನೆ ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ತೀರ್ಮಾನ ತೆಗೆದುಕೊಂಡ ನಂತರ ವಿಶ್ವಸಂಸ್ಥೆ ಜೊತೆ ಪ್ರಧಾನಿಯವರು ಮಾತುಕತೆ ನಡೆಸಿದ್ದು ವಿಶೇಷ ಮಹತ್ವ ಪಡೆದಿದೆ.


ನಿನ್ನೆ ಬಹ್ರೈನ್ ಪ್ರವಾಸ ಮುಗಿಸಿ ಅಲ್ಲಿಂದ ಫ್ರಾನ್ಸಿ ಗೆ ಬಂದಿಳಿದ ಮೋದಿಯವರು ಇಲ್ಲಿ  ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಜಮ್ಮು-ಕಾಶ್ಮೀರ ಜನತೆಗೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಈ ತಿಂಗಳ ಆರಂಭದಲ್ಲಿ ಗುಟೆರೆಸ್ ಭಾರತ ಮತ್ತು ಪಾಕಿಸ್ತಾನವನ್ನು ಒತ್ತಾಯಿಸಿದ್ದರು.


ಕಾಶ್ಮೀರ ಕುರಿತು ಭಾರತ ತೆಗೆದುಕೊಂಡಿರುವ ನಿರ್ಧಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪಾಕಿಸ್ತಾನ ಒತ್ತಾಯ ಮಾಡಿದ್ದಕ್ಕೆ ಅವರು ಶಿಮ್ಲಾ ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ಆ ಒಪ್ಪಂದ ಪ್ರಕಾರ ಯಾವುದೇ ಮೂರನೇ ವ್ಯಕ್ತಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತಿಲ್ಲ.


ಜಮ್ಮು-ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿ ದೊಡ್ಡದು ಮಾಡಬೇಕೆಂದು ಬಯಸಿದ್ದ ಪಾಕಿಸ್ತಾನ ಮತ್ತು ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಚೀನಾಗೆ ತೀವ್ರ ಮುಖಭಂಗವಾಗಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ಕುರಿತು ನಡೆದ ರಹಸ್ಯ ಸಮಾಲೋಚನೆಯಲ್ಲಿ ವಿಶ್ವದ 15 ರಾಷ್ಟ್ರಗಳಿಂದ ಯಾವುದೇ ಹೇಳಿಕೆ ಬಂದಿಲ್ಲ. 


ಜಮ್ಮು-ಕಾಶ್ಮೀರದಲ್ಲಿನ ಸೂಕ್ಷ್ಮ ಪರಿಸ್ಥಿತಿ ಬಗ್ಗೆ ತಿಳಿಯಪಡಿಸುವಂತೆ ವಿಶ್ವಸಂಸ್ಥೆ ಮುಖ್ಯಸ್ಥರಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ ಒತ್ತಾಯಿಸಿದ್ದರು. ಇದರ ಬಳಿಕ ಇದೀಗ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ.


ಸಂವಿಧಾನ ವಿಧಿ 370 ರದ್ದುಪಡಿಸಿರುವುದು ಆಂತರಿಕ ವಿಷಯವಾಗಿದ್ದು ಪಾಕಿಸ್ತಾನ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಭಾರತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿ ಹೇಳಿದೆ. 

SCROLL FOR NEXT