ವಿದೇಶ

ಅಮೆರಿಕ ಅಧ್ಯಕ್ಷೀಯ ಕಣದಿಂದ ಹಿಂದಕ್ಕೆ ಸರಿದ ಸೆನೆಟರ್ ಕಮಲಾ ಹ್ಯಾರಿಸ್

Srinivasamurthy VN

ವಾಷಿಂಗ್ಟನ್: ಭಾರತ ಮೂಲದ ಅಮೆರಿಕ ಸೆನೆಟರ್ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ಕಣದಿಂದ ಹಿಂದಕ್ಕೆ ಸರಿದಿದ್ದಾರೆ.

ಹೌದು.. ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದ್ದು, ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರೀಸ್ ಸ್ಫರ್ಧೆಯಿಂದ ಹಿಂದೆ ಸರಿದಿದ್ದಾರೆ. 

ಮಂಗಳವಾರ ಟ್ವೀಟ್ ಮಾಡುವ ಮೂಲಕ ತಮ್ಮ ರಾಜಕೀಯ ನಡೆಯನ್ನು ಸ್ಪಷ್ಟಪಡಿಸಿರುವ ಕಮಲಾ ಹ್ಯಾರೀಸ್​ ತಾವು ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

'ನನ್ನ ಬೆಂಬಲಿಗರ ಪಾಲಿಗೆ ಇದು ತೀವ್ರ ವಿಷಾಧದ ನಿರ್ಧಾರ. ಆದರೆ, ಅವರೆಡೆಗಿನ ಕೃತಜ್ಞತೆಯೊಂದಿಗೆ ನಾನು ನನ್ನ ಅಧ್ಯಕ್ಷೀಯ ಸ್ಪರ್ಧೆಯ ಅಭಿಯಾನವನ್ನು ಇಲ್ಲಿಗೆ ಸ್ಥಗಿತಗೊಳಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನಾನು ನಿಮಗೊಂದು ವಿಚಾರವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ಅಭಿಯಾನದಲ್ಲಿ ನಾನು ಪ್ರತಿದಿನವೂ ಹೋರಾಡುತ್ತೇನೆ. ಎಲ್ಲಾ ಜನರಿಗೂ ನ್ಯಾಯ ದಕ್ಕುವವರೆಗೆ ನನ್ನ ಹೋರಾಟ ಮುಂದುವರೆಯುತ್ತದೆ.' ಎಂದು ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.

2020ರ ವೇಳೆಗೆ ವಿಶ್ವದ ದೊಡ್ಡಣ್ಣ ಅಮೆರಿಕ ದೇಶದ ಅಧ್ಯಕ್ಷೀಯ ಪದವಿಗೆ ಚುನಾವಣೆ ನಡೆಯಲಿದೆ. ರಿಪಬ್ಲಿಕ್ ಪಕ್ಷದಿಂದ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಸ್ಪರ್ಧೆ ನಡೆಸುವುದು ಬಹುತೇಕ ಖಚಿತವಾಗಿದೆ. ಮತ್ತೊಂದು ಪ್ರಮುಖ ಪಕ್ಷವಾದ ಡೆಮಾಕ್ರಟಿಕ್ ಪಕ್ಷದಿಂದ ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರೀಸ್ ಸ್ಫರ್ಧೆ ನಡೆಸುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಈಗ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಡೆಮಾಕ್ರಟಿಕ್ ಪಕ್ಷ ಕಳೆದ ಜನವರಿಯಲ್ಲೇ ಪಕ್ಷದೊಳಗೆ ಅಧ್ಯಕ್ಷೀಯ ಸ್ಪರ್ಧೆಯನ್ನು ಘೋಷಿಸಿತ್ತು. ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷ ಜೋ ಬಿಡನ್ ಹಾಗೂ ಕಮಲಾ ಹ್ಯಾರೀಸ್ ನಡುವೆ ಅಧ್ಯಕ್ಷೀಯ ಪದವಿಗೆ ತೀವ್ರ ಪೈಪೋಟಿ ಇತ್ತು. ಆದರೆ, 20 ಸಾವಿರ ಬೆಂಬಲಿಗರೊಂದಿಗೆ ಕಮಲಾ ಹ್ಯಾರೀಸ್ ಪಕ್ಷದೊಳಗೆ ತಮ್ಮ ಪ್ರಭಾವವನ್ನು ಬೀರುವ ಮೂಲಕ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿ ಎನಿಸಿಕೊಂಡಿದ್ದರು.

SCROLL FOR NEXT