ವಿದೇಶ

ಬ್ರಿಟನ್ ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಮರು ಆಯ್ಕೆ; ಪ್ರಧಾನಿ ಮೋದಿ ಅಭಿನಂದನೆ!

Srinivasamurthy VN

ಲಂಡನ್: ಬ್ರಿಟನ್ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಾರ್ಟಿ ಭರ್ಜರಿ ಜಯ ಸಾಧಿಸಿದ್ದು, ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿನ ಹಾಲಿ ಫಲಿತಾಂಶದ ಅನ್ವಯ ಒಟ್ಟು 650 ಸ್ಥಾನಗಳ ಪೈಕಿ 600 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷ 326 ಸ್ಥಾನಗಳನ್ನು ಗಳಿಸಿಕೊಂಡಿದ್ದು, ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಕನ್ಸರ್ವೇಟಿವ್ ಪಕ್ಷ ಈಗಾಗಲೇ 43 ಹೆಚ್ಚುವರಿ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಇನ್ನು ಪ್ರತಿಪಕ್ಷ ಲೇಬರ್ ಪಾರ್ಟಿ 55 ಸ್ಥಾನಗಳನ್ನು ಕಳೆದುಕೊಂಡಿದ್ದು, ಈ ವರೆಗಿನ ಫಲಿತಾಂಶ ಅನ್ವಯ 197 ಸ್ಥಾನಗಳನ್ನು ಗಳಿಸಿಕೊಂಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬ್ರೆಕ್ಸಿಟ್ ಒಪ್ಪಂದಕ್ಕೆ ಅನುಮೋದನೆ ಪಡೆದು ಜನವರಿ 31ರ ಒಳಗಾಗಿ ಯೂರೋಪಿಯನ್ ಒಕ್ಕೂಟದಿಂದ ಹೊರಬರಲು ಹಾದಿ ಸುಗಮವಾದಂತಾಗಿದೆ. ಜನವರಿ 31ಕ್ಕೆ ಹೊರಬಂದಲ್ಲಿ ನಿಗದಿತ ಯೋಜನೆಗಿಂತ ಹತ್ತು ತಿಂಗಳು ವಿಳಂಬವಾದಂತಾಗಲಿದೆ. 2016ರ ಬ್ರೆಕ್ಸಿಟ್ ಜನಮತಗಣನೆಯಿಂದ ಆರಂಭಿಸಿದ ಅಭಿಯಾನವನ್ನು ಜಾನ್ಸನ್ ಯಶಸ್ವಿಯಾಗಿ ಮುಂದುವರಿಸಿದ್ದು, ಈ ಬಾರಿ "ಗೆಟ್ ಬ್ರೆಕ್ಸಿಟ್ ಡನ್" ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಕೈಗೊಂಡಿದ್ದರು.

ಪ್ರಧಾನಿ ಮೋದಿ ಅಭಿನಂದನೆ
ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಮತ್ತು ಕನ್ಸರ್ವೇಟಿವ್ ನಾಯಕ ಬೋರಿಸ್ ಜಾನ್ಸನ್ ಅವರು ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ ’ಭರ್ಜರಿ’ ಗೆಲುವಿನೊಂದಿಗೆ ಜಯಗಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ  ಅಭಿನಂದಿಸಿದ್ದಾರೆ. 
"ಪ್ರಧಾನಿ ಬೋರಿಸ್ ಜಾನ್ಸನ್ ಅವರು ಬಹುಮತದೊಂದಿಗೆ ಮರಳಿದ್ದಕ್ಕಾಗಿ  ಅಭಿನಂದನೆಗಳು. ನಾನು ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಭಾರತ-ಯುಕೆ ಸಂಬಂಧಗಳಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತೇನೆ" ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

SCROLL FOR NEXT