ವಿದೇಶ

'ಪೇ ಅಂಡ್ ಸ್ಟೇ' ವೀಸಾ ಹಗರಣ: ಅಮೆರಿಕದಲ್ಲಿ ಭಾರತೀಯ ಮೂಲದ 129 ವಿದ್ಯಾರ್ಥಿಗಳ ಬಂಧನ

Srinivasamurthy VN
ವಾಷಿಂಗ್ಟನ್: ಅಮೆರಿಕದಲ್ಲಿ ದೊಡ್ಡ ಪ್ರಮಾಣದ ವೀಸಾ ಹಗರಣವನ್ನು ಸರ್ಕಾರ ಬಯಲಿಗೆಳೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಒಟ್ಟು 130 ವಿದೇಶಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ಪೈಕಿ 129 ಮಂದಿ ವಿದ್ಯಾರ್ಥಿಗಳು ಭಾರತೀಯರು ಎಂದು ತಿಳಿದುಬಂದಿದೆ.
ಅಮೆರಿಕದ ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಭಾರಿ ದೊಡ್ಡ ಹಗರಣ ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿ ಒಟ್ಟು 129 ಮಂದಿ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ ನಕಲಿ ವಿವಿ ಹೆಸರಿನಲ್ಲಿ ವಿದ್ಯಾರ್ಥಿಗಳು ವೀಸಾ ಪಡೆದಿದ್ದು, ಫಾರ್ಮಿಂಗ್ ಟನ್ ಹಿಲ್ಸ್ ವಿವಿ ಹೆಸರಿನಲ್ಲಿ ವೀಸಾಗಳನ್ನು ಸೃಷ್ಟಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗಳ ಕುರಿತ ಮಾಹಿತಿಗಾಗಿ 24*7 ಹೆಲ್ಪ್ ಲೈನ್ ತೆರೆದ ವಿದೇಶಾಂಗ ಇಲಾಖೆ
ಇನ್ನು ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿಗಳ ಬಂಧನ ವಿಚಾರ ತಿಳಿಯುತ್ತಿದ್ದಂತೆಯೇ ಕೇಂದ್ರ ವಿದೇಶಾಂಗ ಇಲಾಖೆ 24*7 ಹೆಲ್ಪ್ ಲೈನ್ ತೆರೆದಿದ್ದು, ಪೋಷಕರಿಗೆ ಮಾಹಿತಿ ಮತ್ತು ಯಾವುದೇ ರೀತಿಯ ನೆರವು ನೀಡುವುದಾಗಿ ಹೇಳಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ವಿದ್ಯಾರ್ಥಿಗಳ ಸ್ನೇಹಿತರಿಗೆ ಮತ್ತು ಪೋಷಕರಿಗೆ ಕಾನೂನಾತ್ಮಕ ನೆರವು ನೀಡುತ್ತಿದ್ದಾರೆ.
SCROLL FOR NEXT