ವಿದೇಶ

ಪುಲ್ವಾಮ ದಾಳಿ: ಹೆಚ್ಚು ಕಾಣಿಸಿಕೊಳ್ಳಬೇಡಿ, ಉಗ್ರ ನಾಯಕ ಮಸೂದ್ ಅಜರ್, ಹಫೀಜ್ ಸಯೀದ್ ಗೆ ಪಾಕ್ ಸೇನೆ ತಾಕೀತು!

Srinivasamurthy VN
ಇಸ್ಲಾಮಾಬಾದ್: ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ತನ್ನ ರಾಜತಾಂತ್ರಿಕತೆಯ ಮೂಲಕ ಗದಾ ಪ್ರಹಾರ ಮಾಡುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಸೇನೆ ತನ್ನ ದೇಶದ ಉಗ್ರ ಮುಖಂಡರಿಗೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಂತೆ ತಾಕೀತು ಮಾಡಿದೆ.
ಹೌದು.. ಪುಲ್ವಾಮ ಉಗ್ರ ದಾಳಿ ಬಳಿಕ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದು, ಚೀನಾ ಹೊರತು ಪಡಿಸಿ ಇಡೀ ವಿಶ್ವ ಸಮುದಾಯ ಭಾರತಕ್ಕೆ ಬೆಂಬಲ ಘೋಷಣೆ ಮಾಡಿವೆ. ಅದರಲ್ಲೂ ಪ್ರಮುಖವಾಗಿ ಇಸ್ರೇಲ್ ಸರ್ಕಾರ ಭಾರತ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಣಯಕ್ಕೆ ತಾನು ಬೆಂಬಲ ಮಾತ್ರವಲ್ಲದೇ ಭಾರತದ ಯಾವುದೇ ಕಾರ್ಯಾಚರಣೆಯೊಂದಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿದೆ.
ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸೇನೆ, ತನ್ನ ದೇಶದ ಉಗ್ರ ಮುಖಂಡರ ರಕ್ಷಣೆಗೆ ಮುಂದಾಗಿದ್ದು, ಇನ್ನು ಕೆಲವು ತಿಂಗಳುಗಳ ಕಾಲ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಉಗ್ರ ನಾಯಕರಿಗೆ ತಾಕೀತು ಮಾಡಿದೆ. ಪ್ರಮುಖವಾಗಿ ಜೈಶ್ ಇ ಮೊಹಮದ್ ಸಂಸ್ಥಾಪಕ ಮಸೂದ್ ಅಜರ್, ಲಷ್ಕರ್ ಮುಖಂಡ ಹಫೀಜ್ ಸೈಯ್ಯೀದ್ ಗೆ ಪಾಕಿಸ್ತಾನ ಸೇನೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. 
ಪ್ರಸ್ತುತ ಭಾರಿ ಸುದ್ದಿಗೆ ಗ್ರಾಸವಾಗಿರುವ ಪುಲ್ವಾಮ ಉಗ್ರ ದಾಳಿ ಪ್ರಕರಣದ ಬಿಸಿ ಕಡಿಮೆಯಾಗುವವರೆಗೂ ಉಗ್ರ ನಾಯಕರು ಹೆಚ್ಚಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳದಂತೆ ಪಾಕ್ ಸೇನೆ ಎಚ್ಚರಿಕೆ ನೀಡಿದೆ.
ಇನ್ನು ಪುಲ್ವಾಮ ದಾಳಿಯಲ್ಲಿ ಪಾಕಿಸ್ತಾನದ ಪಾತ್ರದ ಕುರಿತು ಭಾರತ ಒತ್ತಿ ಹೇಳುತ್ತಿದ್ದು, ಪಾಕಿಸ್ತಾನ ಸರ್ಕಾರ ಕೂಡ ಅಷ್ಟೇ ನಯವಾಗಿ ಭಾರತದ ಆರೋಪವನ್ನು ತಿರಸ್ಕರಿಸುತ್ತಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ರಾಜತಾಂತ್ರಿಕ ಬೆಂಬಲ ಹೆಚ್ಚಾಗುತ್ತಿದ್ದು, ಇಂದು ರಷ್ಯಾ, ಬ್ರಿಟನ್, ಫ್ರಾನ್ಸ್ ದೇಶಗಳು ಭಾರತಕ್ಕೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದು, ವಿಶ್ವಸಂಸ್ಥೆಯಲ್ಲಿ ಪಾಕ್ ಮೂಲದ ಉಗ್ರ ಮುಖಂಡರಾದ ಮಸೂದ್ ಅಜರ್ ಮತ್ತು ಹಫೀಜ್ ಸಯ್ಯೀದ್ ರನ್ನು ಜಾಗತಿಕ ಉಗ್ರಗಾಮಿಗಳ ಪಟ್ಟಿಗೆ ಸೇರಿಸುವ ಕುರಿತು ಪ್ರಸ್ತಾಪ ಮಂಡಿಸುತ್ತೇವೆ ಎಂದು ಭರವಸೆ ನೀಡಿವೆ.
SCROLL FOR NEXT