ವಿದೇಶ

'ಭೀಕರ ಪರಿಸ್ಥಿತಿ': ಪುಲ್ವಾಮ ಉಗ್ರ ದಾಳಿ ಕುರಿತು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರತಿಕ್ರಿಯೆ

Srinivasamurthy VN
ವಾಷಿಂಗ್ಟನ್: ಪುಲ್ವಾಮ ಉಗ್ರ ದಾಳಿ 6 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಉಗ್ರ ದಾಳಿಯನ್ನು ಭೀಕರ ಪರಿಸ್ಥಿತಿ ಎಂದು ಬಣ್ಣಿಸಿದ್ದಾರೆ.
ಈ ಬಗ್ಗೆ ವೈಟ್ ಹೌಸ್ ನಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು, ಪುಲ್ವಾಮ ದಾಳಿ ಕುರಿತು  ನಾವು ಅಧಿಕಾರಿಗಳಿಂದ ಆಗಿಂದಾಗ್ಗೆ ಮಾಹಿತಿ ಪಡೆಯುತ್ತಿದ್ದೆವು. ಆದರೆ ಸೂಕ್ತ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡೋಣ ಎಂದು ಕಾದಿದ್ದೆವು. ನಿಜಕ್ಕೂ ಏಷ್ಯಾ ಖಂಡದ ಪ್ರಮುಖ ದೇಶಗಳಾದ ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಕೆಲಸ ಮಾಡಿದರೆ ಅದನ್ನು ನೋಡಲು ನಮಗೆ ಖುಷಿಯಾಗುತ್ತದೆ. ಆದರೆ ಇಂತಹ ಭೀಕರ ಪರಿಸ್ಥಿತಿಗಳು ಇದಕ್ಕೆ ಯಾವಾಗಲೂ ತಡೆಯೊಡ್ಡುತ್ತವೆ ಎಂದು ಹೇಳಿದ್ದಾರೆ.
ಅಂತೆಯೇ ಇದೇ ವಿಚಾರವಾಗಿ ಮಾತನಾಡಿರುವ ಅಮೆರಿಕ ವಕ್ತಾರ ರಾಬರ್ಟ್ ಪಲ್ಲಾಡಿನೋ ಅವರು, ಭಾರತಕ್ಕೆ ಅಮೆರಿಕ ಸರ್ಕಾರದ ಸಂಪೂರ್ಣ ಬೆಂಬಲವಿದ್ದು, ಪಾಕಿಸ್ತಾನ ಕೂಡಲೇ ಉಗ್ರ ದಾಳಿಗೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಪರಾಧಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಪಾಕಿಸ್ತಾನ ಸರ್ಕಾರ ಹಿಂಜರಿಯಬಾರದು. ಕೇವಲ ಸಂತಾಪ ಸೂಚಿಸುವುದಕ್ಕೆ ಮಾತ್ರ ಅಮೆರಿಕ ಸೀಮಿತವಾಗಿಲ್ಲ. ಭಾರತಕ್ಕೆ ಎಂತಹುದೇ ಬೆಂಬಲ ನೀಡಲೂ ಅಮರಿಕ ಸಿದ್ಧವಿದೆ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಮೆರಿಕ ರಕ್ಷಣಾ ಸಲಹೆಗಾರ ಜಾನ್ ಬಾಲ್ಟನ್ ಅವರು ಮಾತನಾಡಿ, ಭಾರತಕ್ಕೆ ತನ್ನ ರಕ್ಷಣೆಯ ಸಂಪೂರ್ಣ ಹಕ್ಕಿದೆ. ತನ್ನ ರಕ್ಷಣೆಗೆ ಭಾರತ ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ಅಮೆರಿಕ ಬೆಂಬಲವಿರಲಿದೆ ಎಂದು ಹೇಳಿದರು. 
ಇದೇ ಫೆಬ್ರವರಿ 14ರಂದು ಪುಲ್ವಾಮ ಹೊರವಲಯದಲ್ಲಿ ಜೈಶ್ ಉಗ್ರರು ನಡೆಸಿದ್ದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
SCROLL FOR NEXT