ವಿದೇಶ

ಭಾರತ ಶಾಂತಿ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸುತ್ತಿಲ್ಲ- ಇಮ್ರಾನ್ ಖಾನ್

Nagaraja AB

ಇಸ್ಲಾಮಾಬಾದ್ : ಭಾರತ ಶಾಂತಿ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವಿನ ಯಾವುದೇ ಯುದ್ಧವು ನಮ್ಮನ್ನು ನಾವೇ ಹತ್ಯೆ ಮಾಡಿಕೊಂಡಂತಾಗುತ್ತದೆ ಎಂದಿದ್ದಾರೆ.

ಟರ್ಕಿ ದೇಶದ ನ್ಯೂಸ್ ಎಜೆನ್ಸಿಯೊಂದಕ್ಕೆ ನೀಡಿದ ಸಂದರ್ಶದಲ್ಲಿ ಮಾತನಾಡಿರುವ ಇಮ್ರಾನ್ ಖಾನ್, ಶೀತಲ ಸಮರವೂ ಸಹ ಎರಡು ದೇಶಗಳ ಹಿತಾಸಕ್ತಿಯಲ್ಲ , ಭಾರತದೊಂದಿಗೆ ಮತ್ತೆ ಮಾತುಕತೆ ನಡೆಸಬೇಕೆಂದು ಬಯಸಿರುವುದಾಗಿ ತಿಳಿಸಿದ್ದಾರೆ.

ಪರಮಾಣು ಶಸ್ತ್ರಸಜ್ಜಿತ ಎರಡು ರಾಷ್ಟ್ರಗಳು ಯುದ್ಧ ಮಾಡುವ ಅಥವಾ ಶೀತಲ ಸಮರದ ಉದ್ದೇಶ ಹೊಂದಿಲ್ಲ. ಏಕೆಂದರೆ ಇದರಿಂದ ಯಾವುದೇ ಸಮಯದಲ್ಲೂ ಹೆಚ್ಚಿನ ಹಾನಿಯಾಗಬಹುದು, ದ್ವಿಪಕ್ಷೀಯ ಮಾತುಕತೆಯೊಂದೆ ಪರ್ಯಾಯ ಮಾರ್ಗವಾಗಿದೆ. ಎರಡು ರಾಷ್ಟ್ರಗಳ ನಡುವಿನ ಯುದ್ಧ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅವರು ಹೇಳಿದ್ದಾರೆ.

ಶಾಂತಿ ಪ್ರಸ್ತಾಪಗಳಿಗೆ ಭಾರತ  ಪ್ರತಿಕ್ರಿಯಿಸುತ್ತಿಲ್ಲ, ಈ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಡೆ ಮುಂದಿಡುತ್ತೇವೆ. ಆದರೆ, ಮಾತುಕತೆಗಾಗಿ ಅನೇಕ ಬಾರಿ ಪ್ರಯತ್ನಿಸಿದ್ದರೂ ಭಾರತ ತಿರಸ್ಕರಿಸುತ್ತಿದೆ ಎಂದು ಖಾನ್ ಹೇಳಿದ್ದಾರೆ.


2016ರಲ್ಲಿ ಪಾಕಿಸ್ತಾನದ ಮೂಲಕ ಉಗ್ರರು ದಾಳಿ ನಡೆಸಿದ ನಂತರ ಭಾರತ- ಪಾಕಿಸ್ತಾನ ನಡುವಿನ ಒಪ್ಪಂದಗಳು ತಗ್ಗಿದ್ದವು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕಗಳು ನಡೆದಿಲ್ಲ.

SCROLL FOR NEXT