ವಿದೇಶ

ಕೊನೆಗೂ ಭಾರತಕ್ಕೆ ವಾಯುಗಡಿ ತೆರೆದ ಪಾಕಿಸ್ತಾನ, ವಿಮಾನ ಸಂಚಾರ ಪುನಾರಂಭ!

Srinivasamurthy VN
ನವದೆಹಲಿ: ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಭಾರತಕ್ಕೆ ನಿರ್ಬಂಧಿಸಲಾಗಿದ್ದ ಪಾಕಿಸ್ತಾನ ವೈಮಾನಿಕ ವಲಯ ಬಳಕೆಯನ್ನು ಮತ್ತೆ ಪುನಾರಂಭ ಮಾಡಲಾಗಿದ್ದು, ಇಂದು ಬೆಳಗ್ಗೆಯಿಂದಲೇ ಮತ್ತೆ ವಿಮಾಗಳ ಸಂಚಾರ ಪುನರಾರಂಭಗೊಂಡಿದೆ.
ಈ ಹಿಂದೆ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಮೇಲೆ ಭಾರತ ಇನ್ನಷ್ಟು ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುವ ಆತಂಕದಿಂದಾಗಿ ಪಾಕಿಸ್ತಾನ ಸರ್ಕಾರವು ತನ್ನ ಏರೋಸ್ಪೇಸ್ ಬಳಕೆಯನ್ನು ಭಾರತಕ್ಕೆ ನಿರ್ಬಂಧಿಸಿತ್ತು.
ಇದರಿಂದ ಪಾಕಿಸ್ತಾನ ಹಾಗೂ ಇತರೆ ದೇಶಗಳ ನಾಗರಿಕ ವಿಮಾನಯಾನ ಹಾರಾಟ ಕೂಡ ಪಾಕಿಸ್ತಾನದ ಏರೋಸ್ಪೇಸ್ ನಲ್ಲಿ ರದ್ದಾಗಿತ್ತು. ಹೀಗಾಗಿಗ ಪಾಕಿಸ್ತಾನ ತನ್ನ ವಾಯುಗಡಿ ತೆರೆಯುವಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಒತ್ತಡ ಕೇಳಿ ಬಂದಿತ್ತು. ಭಾರತೀಯ ವಾಯು ಸೇನೆಯ ವಾಯುದಾಳಿ ನಡೆದ ನಾಲ್ಕು ತಿಂಗಳ ಬಳಿಕ ಇದೀಗ ಪಾಕಿಸ್ತಾನ ಕೊನೆಗೂ ನಾಗರಿಕ ವಿಮಾನ ಸೇವೆಗೆ ತನ್ನ ವಾಯುಗಡಿಯನ್ನು ತೆರೆದಿದೆ. 
ಅದರಂತೆ ವಿದೇಶಿ ವಿಮಾನಗಳು ಮಾತ್ರವಲ್ಲದೇ ಭಾರತೀಯ ವಿಮಾನಗಳು ಕೂಡ ಈಗ ಪಾಕಿಸ್ತಾನದ ಏರೋಸ್ಪೇಸ್‌ ನಲ್ಲಿ ಹಾರಾಡಬಹುದಾಗಿದೆ. ಕಳೆದ ತಿಂಗಳು ಕಿರ್ಗಿಸ್ತಾನದಲ್ಲಿ ನಡೆದ ಶಾಂಘೈ ಸರ್ಕಾರ ಒಕ್ಕೂಟ ಸಭೆಯಲ್ಲಿ ಭಾಗವಹಿಸಲು ಮೋದಿ ತೆರಳುವಾಗ ಪಾಕಿಸ್ತಾನ ಬದಲಿಗೆ ಬೇರೆ ಮಾರ್ಗವನ್ನು ಬಳಸಿದ್ದರು.
ಭಾರತ ಮನವಿ ಸಲ್ಲಿಸಿದರೆ ಪ್ರಧಾನಿ ಮೋದಿ ವಿಮಾನ ಹಾರಾಟಕ್ಕೆ ಅವಕಾಶ ಮಾಡಿಕೊಡುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ ಭಾರತ ಯಾವುದೇ ಮನವಿ ಸಲ್ಲಿಸಿರಲಿಲ್ಲ. ಇದೇ ರೀತಿ ಭಾರತವು ಪಾಕಿಸ್ತಾನದ ವೈಮಾನಿಕ ಹಾರಾಟದ ಮೇಲೆ ಹೇರಿದ್ದ ನಿರ್ಬಂಧವನ್ನು ಮೇ 31ರಂದು ತೆರವುಗೊಳಿಸಿತ್ತು. ಈ ನಿರ್ಬಂಧದಿಂದ ಭಾರತಕ್ಕೆ ಜುಲೈ 2ರವರೆಗೆ 491 ಕೋಟಿ ರೂ ನಷ್ಟ ಉಂಟಾಗಿತ್ತು. ಸ್ಪೈಸ್ ಜೆಟ್, ಇಂಡಿಗೋ, ಗೋ ಏರ್‌ ಗೆ 30.73 ಕೋಟಿ , 25.1 ಕೋಟಿ, 2.1ಕೋಟಿ ರೂ ನಷ್ಟವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ವಾಯುಗಡಿ ತೆರೆದ ಪಾಕಿಸ್ತಾನದ ಕ್ರಮಕ್ಕೆ ಆಫ್ಘಾನಿಸ್ತಾನ ಬೆಂಬಲ ನೀಡಿದ್ದು, ಪಾಕಿಸ್ತಾನದ ನಡೆ ಸ್ವಾಗತರ್ಹ ಎಂದು ಹೇಳಿದೆ.
SCROLL FOR NEXT