ವಿದೇಶ

ಪಾಕಿಸ್ತಾನದಲ್ಲಿ 40 ಸಾವಿರ ಉಗ್ರರಿದ್ದಾರೆ: ಕೊನೆಗೂ ಸತ್ಯ ಒಪ್ಪಿಕೊಂಡ ಪ್ರಧಾನಿ ಇಮ್ರಾನ್ ಖಾನ್

Srinivasamurthy VN
ವಾಷಿಂಗ್ಟನ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊನೆಗೂ ಸತ್ಯ ಒಪ್ಪಿಕೊಂಡಿದ್ದು, ಪಾಕಿಸ್ತಾನದಲ್ಲಿ ಸುಮಾರು 40 ಸಾವಿರ ಉಗ್ರರಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಇಮ್ರಾನ್ ಖಾನ್ ಅವರು, ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೌದು.. ಪಾಕಿಸ್ತಾನದಲ್ಲಿ ಸುಮಾರು 40 ಸಾವಿರ ಉಗ್ರರಿದ್ದಾರೆ. ಅವರೆಲ್ಲರೂ ಆಫ್ಘಾನಿಸ್ತಾನ ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆದು ಪಾಕಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 
'2014ರಲ್ಲಿ ನಡೆದ ಸೇನಾ ಶಾಲೆಯ ಮೇಲಿನ ದಾಳಿ ಬಳಿಕ ಪಾಕಿಸ್ತಾನದ ರಾಜಕೀಯ ಮಹತ್ತರ ಬದಲಾವಣೆಗಳಾಗಿದ್ದು, ಉಗ್ರರಿಗೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಉಗ್ರರ ಮಟ್ಟಹಾಕಲು ಕ್ರಿಯಾ ಯೋಜನೆ ರೂಪಿಸಿವೆ. ಅದರಂತೆ ಇನ್ನು ಮುಂದೆ ಪಾಕಿಸ್ತಾನದಲ್ಲಿ ಯಾವುದೇ ರೀತಿಯ ಉಗ್ರ ಚಟುವಟಿಕೆಗಳಿಗೆ ಅನುವು ನೀಡದೇ ಇರವು ನಿರ್ಧರಿಸಲಾಗಿದೆ. ನಮ್ಮ ನೆಲದಿಂದ ಯಾವುದೇ ರೀತಿಯ ಉಗ್ರ ಸಂಘಟನೆಗಳು ಕಾರ್ಯಾಚರಣೆ ಮಾಡಬಾರದು ಎಂಬ ಒಕ್ಕೋರಲಿನ ನಿರ್ಣಯ ಕೈಗೊಂಡಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಹೇಳಿಕೆಯಲ್ಲೇ ಟ್ವಿಸ್ಟ್ ನೀಡಿರುವ ಇಮ್ರಾನ್ ಖಾನ್, ಪ್ರಸ್ತುತ ಪಾಕಿಸ್ತಾನದಲ್ಲಿ ಸುಮಾರು 30 ಸಾವಿರದಿಂದ 40 ಸಾವಿರ ಉಗ್ರರು ಸಕ್ರಿಯರಾಗಿದ್ದಾರೆ. ಅವರೆಲ್ಲರೂ ನೆರೆಯ ಆಫ್ಘಾನಿಸ್ತಾನ ಮತ್ತು ಕಾಶ್ಮೀರದಲ್ಲಿ ತರಭೇತಿ ಪಡೆದು ಪಾಕಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ ಎಂಜದು ಹೇಳುವ ಮೂಲಕ ಭಾರತ ಮತ್ತು ಆಫ್ಘಾನಿಸ್ತಾನದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಅಂತೆಯೇ ಉಗ್ರರನ್ನು ನಿಶ್ಯಸ್ಥ್ರೀಕರಣಗೊಳಿಸುವ ಕೆಲಸಕ್ಕೆ ಹಾಕಿದ್ದೇ ತಮ್ಮ ನೇತೃತ್ವದ ಸರ್ಕಾರ ಎಂದು  ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ಇಮ್ರಾನ್ ಖಾನ್ ಜೊತೆ ಇದ್ದ ಸಚಿವರೊಬ್ಬರು ಮಾತನಾಡಿ ಸುಮಾರು 40 ಉಗ್ರ ಸಂಘಟನೆಗಳು ಪಾಕ್ ಗಡಿಯಲ್ಲಿ ಸಕ್ರಿಯವಾಗಿದ್ದು, ಇವುಗಳ ನಿಯಂತ್ರಣಕ್ಕೆ ಇಮ್ರಾನ್ ಖಾನ್ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಈ ಹಿಂದಿನ ಸರ್ಕಾರಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದವು. ಆದರೆ ನಮ್ಮ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಕಾರಣಕ್ಕೂ ನಮ್ಮ ನೆಲದಲ್ಲಿ ಉಗ್ರರು ಕಾರ್ಯಾಚರಣೆ ನಡೆಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
SCROLL FOR NEXT