ವಿದೇಶ

ಪಾಕಿಸ್ತಾನ ಮಿಲಿಟರಿ ವಿಮಾನ ಪತನ: 17 ಸಾವು, 12 ಮಂದಿಗೆ ಗಾಯ

Sumana Upadhyaya
ರಾವಲ್ಪಿಂಡಿ: ಪಾಕಿಸ್ತಾನದ ರಾವಲ್ಪಿಂಡಿ ನಗರದ ವಸತಿ ಪ್ರದೇಶದಲ್ಲಿ ಸಣ್ಣ ಮಿಲಿಟರಿ ವಿಮಾನ ಮಂಗಳವಾರ ನಸುಕಿನ ಜಾವ ಅಪಘಾತಕ್ಕೀಡಾಗಿ 17 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. 
ಸೇನಾ ವಲಯದ ಕೇಂದ್ರ ಕಚೇರಿಗೆ ಹೊಂದಿಕೊಂಡಂತಿರುವ ಗ್ರಾಮದ ಸಮೀಪ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿ ಅದರ ರಭಸಕ್ಕೆ ಬೆಂಕಿಚೆಂಡು ಉತ್ಪತ್ತಿಯಾಗಿ ಆಕಾಶ ತುಂಬಿ ಅಲ್ಲಿನ ನಿವಾಸಿಗಳಿಗೆ ಭೀತಿಯನ್ನುಂಟುಮಾಡಿತು.
ಅಪಘಾತದ ಬಳಿಕ ಅವಶೇಷಗಳಡಿಯಲ್ಲಿ 17 ಮೃತದೇಹಗಳು ಪತ್ತೆಯಾಗಿದ್ದು ಅವುಗಳಲ್ಲಿ 12 ನಾಗರಿಕರು ಮತ್ತು 5 ಮಿಲಿಟರಿ ಸಿಬ್ಬಂದಿಗಳಾಗಿದ್ದಾರೆ ಎಂದು ಸ್ಥಳೀಯ ಸುರಕ್ಷಣಾ ವಕ್ತಾರ ಫರೂಕ್ ಭಟ್ ತಿಳಿಸಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ. 
ಇಂದು ನಸುಕಿನ ಜಾವ 2 ಗಂಟೆ ವೇಳೆಗೆ ಅಪಘಾತಕ್ಕೀಡಾಗಿದೆ. ಭಾರೀ ಸ್ಫೋಟದ ಶಬ್ದ ಕೇಳಿ ಎಚ್ಚರಗೊಂಡೆ. ಮನೆಯಿಂದ ಹೊರ ಹೋಗಿ ನೋಡಿದರೆ ಭಾರೀ ದೊಡ್ಡ ಹೊಗೆ ಕಾಣಿಸಿತು, ಸ್ಥಳಕ್ಕೆ ಹೋಗಿ ನೋಡಿದರೆ ವಿಮಾನ ಅಪಘಾತಕ್ಕೀಡಾಗಿರುವುದು ಗೊತ್ತಾಯಿತು ಎನ್ನುತ್ತಾರೆ ಮಹಮ್ಮದ್ ಸಾದಿಖ್ ಎಂಬ ಇಲ್ಲಿನ ನಿವಾಸಿ.
ವಿಮಾನ ಇಂದು ನಸುಕಿನ ಜಾವ ಎಂದಿನಂತೆ ದಿನನಿತ್ಯದ ತರಬೇತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಅಪಘಾತಕ್ಕೀಡಾಗಿದೆ. 
SCROLL FOR NEXT