ವಿದೇಶ

ಮಾಲ್ಡೀವ್ಸ್ ರಾಜಧಾನಿ ಮಾಲೆ ತಲುಪಿದ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ

Nagaraja AB
ಮಾಲೆ: ಎರಡು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರವಾಸದ ಮೊದಲ ಚರಣದಲ್ಲಿ ಮಾಲ್ಡೀವ್ಸ್ ರಾಜಧಾನಿ ಮಾಲೆ ತಲುಪಿದ್ದಾರೆ.
ಮಾಲೆ ತಲುಪಿದ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮಹಮದ್ ಸಾಲೇಹ್ ಬರಮಾಡಿಕೊಂಡರು, ರಿಪಬ್ಲಿಕ್ ಆಪ್ ಮಾಲೆಸ್ಕ್ವೇರ್ ನಲ್ಲಿ ಮೋದಿ ಅವರಿಗೆ ಸಂಪ್ರದಾಯಿಕ ಸ್ವಾಗತ ಕೋರಲಾಯಿತು.
2011ರ ನಂತರ ಭಾರತೀಯ ಪ್ರಧಾನಿಯೊಬ್ಬರು ಮಾಲ್ಡೀವ್ಸ್ ಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಮಾಲ್ಡೀವ್ಸ್ ಸರ್ಕಾರ ತನ್ನ ವಿದೇಶಿ ನಾಗರಿಕರಿಗೆ ನೀಡುವ ಅತ್ಯುನ್ನತ “ನಿಷಾನ್ ಇಝುದ್ದೀನ್' ಪುರಸ್ಕಾರವನ್ನು ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಲಿದೆ.
ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸಾಲೇ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ, ಉಪ ರಾಷ್ಟ್ರಪತಿ ಫೈಸಲ್ ನಸೀಂ ಹಾಗೂ ಸಂಸತ್ತಿನ ಸ್ಪೀಕರ್ ಹಾಗೂ ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅವರನ್ನು ಭೇಟಿ ಮಾಡಲಿದ್ದಾರೆ.
ದ್ವೀಪ ರಾಷ್ಟ್ರ ಮಾಲ್ಡೀವ್ಸ್ ದೇಶದ ಸಂಸತ್ “ ಮಜ್ಲೀಸ್ “ ಉದ್ದೇಶಿಸಿ ಮಾತನಾಡಲಿದ್ದಾರೆ. ಹಲವು ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮ ನಿಗದಿಯಾಗಿದೆ.
ಪ್ರಧಾನಿ ಮೋದಿ, ಅಧ್ಯಕ್ಷ ಸಾಲೇಹ್ ಅವರೊಂದಿಗೆ ಕರಾವಳಿ ಕಣ್ಗಾವಲು ವ್ಯವಸ್ಥೆ ಹಾಗೂ ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗಳ ಸಮಗ್ರ ತರಬೇತಿ ಕೇಂದ್ರ ಉದ್ಘಾಟಿಸಲಿದ್ದಾರೆ. ಈ ಎರಡೂ ಯೋಜನೆಗಳಿಗೆ ಭಾರತ ಆರ್ಥಿಕ ನೆರವು ಕಲ್ಪಿಸಿದೆ.
ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ, ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದಿಂದ ಫ್ರೈಡೇ ಮಸೀದಿ ಪುನರುಜ್ಜೀವನ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಪ್ರವಾಸದ ಎರಡನೇ ಚರಣದಲ್ಲಿ ನಾಳೆ ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ.ಪ್ರಧಾನಿ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನೊಳಗೊಂಡ ಉನ್ನತ ನಿಯೋಗ ಒಳಗೊಂಡಿದೆ.
SCROLL FOR NEXT