ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚೀನಾ ಯಾವುದೇ ಒಂದು ದೇಶದ ಪರವಾಗಿ ನಿಲ್ಲುವುದಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.
ಈ ಬಗ್ಗೆ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದ್ದು, ಅಭಿವೃದ್ಧಿಯಿಂದ ಕುಂಠಿತವಾಗಿರುವ ಕಾಶ್ಮೀರವನ್ನು ಪ್ರಗತಿಯತ್ತ ಕೊಂಡೊಯ್ಯಲು ಚೀನಾ ಆಸಕ್ತಿ ಹೊಂದಿದೆ ಹೇಳಿದೆ. ಅಂತೆಯೇ ವಿವಾದಿತ ಕಾಶ್ಮೀರ ಹಿಂದುಳಿದ ಪ್ರದೇಶವಾಗಿಯೇ ಇರಬೇಕು ಎನ್ನವ ವಿಧಿಲಿಖಿತವಿಲ್ಲ. ಇದನ್ನು ಅಭಿವೃದ್ಧಿ ಪಡಿಸುವುದು ಚೀನಾದ ಗುರಿಯಾಗಿದೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನದ ಗುರಿಯೂ ಇದೇ ಆಗಿರಬೇಕು. ಈ ವಿಚಾರದಲ್ಲಿ ಭಾರತ–ಪಾಕ್ ಒಂದೊಂದು ಹೆಜ್ಜೆ ಮುಂದಿಟ್ಟರೆ, ಎರಡೂ ದೇಶಗಳ ನಡುವಿನ ನಂಬಿಕೆ ವೃದ್ಧಿಗೆ ನಾಂದಿಯಾಗುತ್ತದೆ. ಚೀನಾದೊಂದಿಗೆ ಸೇರಿ ಭಯೋತ್ಪಾದನೆಯನ್ನು ನಾಶಗೊಳಿಸುವಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಬಲಗೊಳ್ಳುತ್ತದೆ ಎಂದು ಹೇಳಿದೆ.
ಇದೇ ವೇಳೆ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಯ ಸಂಚುಕೋರ ಜೈಷ್ ಎ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೆಸರನ್ನು ವಿಶ್ವಸಂಸ್ಥೆಯ ನಿರ್ಬಂಧ ಪಟ್ಟಿಯಲ್ಲಿ ಸೇರಿಸಲು ಚೀನಾ ತಡೆ ನೀಡಿದೆ. ಹೀಗಾಗಿ ಪಾಕ್ ಮೂಲದ ಉಗ್ರ ಸಂಘಟನೆಗೆ ಚೀನಾ ಬೆಂಬಲಿಸುತ್ತಿದೆ ಎನ್ನವ ಬಗ್ಗೆ ಭಾರತ ವ್ಯಕ್ತಪಡಿಸಿರುವ ಕಳವಳವನ್ನು ಪತ್ರಿಕೆ ತಳ್ಳಿಹಾಕಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದದಲ್ಲಿ ನಾವು ಯಾರ ಪರವೂ ವಹಿಸುವುದಿಲ್ಲ. ಬದಲಿಗೆ ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಕಡಿಮೆಗೊಳಿಸುವ ಹಾಗೂ ಭಯೋತ್ಪಾದನ ವಿರೋಧಿ ಪರಿಸ್ಥಿತಿಯನ್ನು ಹೆಚ್ಚಿಸುವ ಉದ್ದೇಶ ನಮ್ಮದಾಗಿದೆ. ಈಗಿರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವಲ್ಲಿ ಚೀನಾ ಮಧ್ಯವರ್ತಿಯಾಗಿ ಕೆಲಸ ಮಾಡಲಿದೆ ಎಂದಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರನ್ನು ಭೇಟಿ ಮಾಡಿದ್ದ ಕಾಂಗ್, ಇಸ್ಲಾಮಾಬಾದ್‌ನಲ್ಲಿ ಶಾಂತಿ ಮತ್ತು ಸುಸ್ಥಿರತೆ ನೆಲಸಲು ಚೀನಾ ನೆರವು ನೀಡುತ್ತದೆ ಎಂದು ಭರವಸೆ ನೀಡಿದ್ದರು. ಹೀಗಾಗಿ ಭಯೋತ್ಪಾದನೆಯನ್ನು ರಕ್ಷಿಸುತ್ತಿದೆ ಎಂದು ಚೀನಾದ ಮೇಲೆ ಆಪಾದನೆ ಮಾಡುವುದು ಬೇಜವಾಬ್ದಾರಿತನದ ಹೇಳಿಕೆಯಾಗಿದೆ. ಆದಾಗ್ಯೂ, ಭಾರತ ಕೆಲವು ತಜ್ಞರು ಚೀನಾದ ಈ ಪ್ರಯತ್ನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಭಯೋತ್ಪಾದನೆಗೆ ಚೀನಾ ತನ್ನ ಬೆಂಬಲವನ್ನು ಮುಂದುವರಿಸಿದೆ ಎಂದು ಆರೋಪಸಿದ್ದಾರೆ. ಅಲ್ಲದೆ, ಭಾರತದ ಸಾಕಷ್ಟು ವಿಶ್ಲೇಷಕರು ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಭೂ ರಾಜಕೀಯ ಬೆದರಿಕೆ ಎಂದಿದ್ದಾರೆ ಎಂದು ತಿಳಿಸಿದೆ.