ವಿದೇಶ

ಲೋಕಸಭಾ ಚುನಾವಣೆ ಬಳಿಕ ಭಾರತದೊಂದಿಗೆ ಪಾಕ್ ಉತ್ತಮ ಬಾಂಧವ್ಯ ಹೊಂದಲಿದೆ: ಇಮ್ರಾನ್ ಖಾನ್

Srinivasamurthy VN
ಇಸ್ಲಾಮಾಬಾದ್: ಲೋಕಸಭಾ ಚುನಾವಣೆ ಬಳಿಕ ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ಅವರು, ಪಾಕಿಸ್ತಾನ ಈಗಾಗಲೇ ಭಾರತದೊಂದಿಗೆ ಶಾಂತಿ-ಸೌಹಾರ್ಧ ಸಂಬಂಧ ಬೆಸೆಯುವ ಸಂಬಂಧ ಮೊದಲ ಹೆಜ್ಜೆ ಇಟ್ಟಿದೆ. ಭವಿಷ್ಯದಲ್ಲಿ ಭಾರತದ ನೂತನ ಸರ್ಕಾರದೊಂದಿಗೆ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.
'ಪಾಕಿಸ್ತಾನ ತನ್ನ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸೌಹಾರ್ಧ ಸಂಬಂಧ ಹೊಂದಲು ಬಯಸುತ್ತದೆ. ಅದೇ ರೀತಿ ಭಾರತದಲ್ಲಿನ ಸಾರ್ವತ್ರಿಕ ಚುನಾವಣೆ ಮುಕ್ತಾಯದ ಬಳಿಕ ನೂತನ ಸರ್ಕಾರದೊಂದಿಗೆ ಈ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕು ಎಂದು ನಾವು ಬಯಸುತ್ತೇವೆ ಎಂದು ಇಮ್ರಾನ್ ಖಾನ್ ಹೇಳಿದರು.
ಇದೇ ವೇಳೆ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರವಾಸೋಧ್ಯಮ ಮತ್ತು ಬಂಡವಾಳ ಕ್ಷೇತ್ರ ಉತ್ತೇಜನಕ್ಕಾಗಿ, ತಮ್ಮ ದೇಶದ ವೀಸಾ ನಿಯಮಾವಳಿಯಲ್ಲಿ ಮಹತ್ತರ ಬದಲಾವಣೆ ಮಾಡಿರುವುದಾಗಿ ಘೋಷಣೆ ಮಾಡಿದ್ದು, ಇ-ವೀಸಾ ಸೌಲಭ್ಯ ಶೀಘ್ರವೇ ಜಾರಿಗೆ ಬರಲಿದೆ ಎಂದು ಹೇಳಿದರು.
ಇನ್ನು ಇದೇ ಏಪ್ರಿಲ್ 11 ರಿಂದ ಭಾರತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಲಿದೆ.
ಕಳೆದ ಫೆಬ್ರವರಿ 14ರಂದು ಪುಲ್ವಾಮದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ನಡೆಸಿದ್ದ ಭೀಕರ ಉಗ್ರ ದಾಳಿಯಲ್ಲಿ 44 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಕುದಿಯುತ್ತಿದ್ದ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಬಾಲಾಕೋಟ್ ಟೆರರ್ ಕ್ಯಾಂಪ್ ಗಳ ಮೇಲೆ ಏರ್ ಸ್ಟ್ರೈಕ್ ನಡೆಸಿತ್ತು. ಬಳಿಕ ಪಾಕಿಸ್ತಾನ ಎಫ್ 16 ಯುದ್ಧ ವಿಮಾನಗಳು ಭಾರತದ ಗಡಿಯೊಳಗೆ ನುಸುಳಿದ್ದಾಗ ಅವುಗಳನ್ನು ಹಿಮ್ಮೆಟಿಸುವ ಭರದಲ್ಲಿ ಪಾಕಿಸ್ತಾನ ಒಂದು ಎಫ್ 16 ಯುದ್ಧ ವಿಮಾನ ಮತ್ತು ಭಾರತದ ಮಿಗ್ 21 ಯುದ್ಧ ವಿಮಾನ ಪತನವಾಗಿದ್ದವು. 
ಈ ವೇಳೆ ಪಾಕಿಸ್ತಾನದ ಎಫ್ 16 ಜೆಟ್ ಯುದ್ಧ ವಿಮಾನದಿಂದ ಕೆಳಗೆ ಬಿದ್ದ ಪಾಕಿಸ್ತಾನದ ಪೈಲಟ್ ನನ್ನು ಸ್ಥಳೀಯರೇ ಭಾರತೀಯ ಪೈಲಟ್ ಎಂದು ತಪ್ಪಾಗಿ ಗ್ರಹಿಸಿ ಹೊಡೆದು ಕೊಂದು ಹಾಕಿದ್ದರು. ಅಂತೆಯೇ ಭಾರತದ ಮಿಗ್ 21 ಯುದ್ಧ ವಿಮಾನದಿಂದ ಕೆಳಗೆ ಬಿದ್ದಿದ್ದ ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ರನ್ನು ಪಾಕ್ ಸೇನೆ ವಶಕ್ಕೆ ಪಡೆದುಕೊಂಡಿತ್ತು. ವಶಕ್ಕೆ ಪಡೆದ 2 ದಿನಗಳ  ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶಾಂತಿದ್ಯೋತಕವಾಗಿ ಭಾರತೀಯ ಪೈಲಟ್ ರನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು. ಅದರಂತೆ ಮಾರನೇ ದಿನವೇ ಅಭಿನಂದನ್ ಭಾರತಕ್ಕೆ ವಾಪಸ್ ಆಗಿದ್ದರು.
SCROLL FOR NEXT