ವಿದೇಶ

ಅಮೆರಿಕ ಅಜರ್‌ ವಿರುದ್ಧ ಬಲವಂತದ ನಿರ್ಣಯ ಮಂಡಿಸುವ ಮೂಲಕ ವಿಶ್ವಸಂಸ್ಥೆಯನ್ನು ಕಡೆಗಣಿಸುತ್ತಿದೆ: ಚೀನಾ

Lingaraj Badiger
ಬೀಜಿಂಗ್‌: ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ನಿಟ್ಟಿನಲ್ಲಿ ಅಮೆರಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬಲವಂತದ ಕರಡು ನಿರ್ಣಯ ಮಂಡಿಸುತ್ತಿದೆ ಎಂದು ಗುರುವಾರ ಚೀನಾ ಆರೋಪಿಸಿದೆ. ಅಲ್ಲದೆ ಅಮೆರಿಕದ ಈ ನಡೆ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ ಎಂದು ಹೇಳಿದೆ.
ಮಸೂದ್ ಅಜರ್ ವಿರುದ್ಧ ಬಲವಂತದ ನಿರ್ಣಯ ಮಂಡಿಸುವುದನ್ನು ತಪ್ಪಿಸಬೇಕು ಮತ್ತು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಅಮೆರಿಕಕ್ಕೆ ಚೀನಾ ಎಚ್ಚರಿಕೆ ನೀಡಿದೆ.
ಸಂವಾದ ಮತ್ತು ಮಾತುಕತೆಯ ಮೂಲಕವೇ ನಿರ್ಣಯವನ್ನು ಮಂಡಿಸುವ ಕ್ರಮಕ್ಕೆ ತಕ್ಕುದಾದ ರೀತಿಯಲ್ಲಿ ನಡೆಯುತ್ತಿಲ್ಲ. ಇದರಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರ ನಿಗ್ರಹ ಸಮಿತಿಯ ಅಧಿಕಾರ ಕುಗ್ಗುವಂತಾಗಿದೆ. ಅಮೆರಿಕ ವಿಶ್ವಸಂಸ್ಥೆಯನ್ನು ಕಡೆಗಣಿಸುತ್ತಿದೆ. ಭದ್ರತಾ ಮಂಡಳಿಯ ಸದಸ್ಯರಲ್ಲಿನ ಒಗ್ಗಟ್ಟು ಮತ್ತು ಏಕತೆಗೆ ಇದು ಪೂರಕವಾಗಿಲ್ಲ. ಇದರಿಂದಾಗಿ ಸಮಸ್ಯೆ ಇನ್ನಷ್ಟು ಸಂಕೀರ್ಣಗೊಳ್ಳಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಅವರು ಹೇಳಿದ್ದಾರೆ.
ಪುಲ್ವಾಮಾ ಉಗ್ರ ದಾಳಿಯ ನಂತರ, ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ, ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಹೊಸ ಪ್ರಸ್ತಾವನೆ ಸಲ್ಲಿಸಿವೆ.  ಆದರೆ ಚೀನಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.  ಈ ಸಂಬಂಧ ಚೀನಾ ನಡೆಯನ್ನು ಭಾರತ ಮಾತ್ರವಲ್ಲದೇ ಅಮೆರಿಕ, ಫ್ರಾನ್ಸ್, ಬ್ರಿಟನ್ ದೇಶಗಳೂ ವಿರೋಧಿಸಿದ್ದವು.
SCROLL FOR NEXT