ವಿದೇಶ

ಭಾರತದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯ ಗೂಢಚಾರಿಕೆ ಮಾಡಿಲ್ಲ: ಅಮೆರಿಕ ಸ್ಪಷ್ಟನೆ

Srinivasamurthy VN
ನವದೆಹಲಿ: ಭಾರತ ನಡೆಸಿದ್ದ ತನ್ನ ಮೊಟ್ಟ ಮೊದಲ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯನ್ನು ತಾನು ಗೂಢಚಾರಿಕೆ ಮಾಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ.
ಭಾರತದ ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯ ಮೇಲೆ ಅಮೆರಿಕ ತನ್ನ ಕಳ್ಳಗಣ್ಣು ಇಟ್ಟಿತ್ತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿದ್ದವು. ಭಾರತದ ಕ್ಷಿಪಣಿ ಯೋಜನೆ ಮೇಲೆ ಕಣ್ಣಿಡಲೆಂದೇ ಅಮೆರಿಕ ತನ್ನ ಅತ್ಯಾಧುನಿಕ ಸ್ಥಳಾನ್ವೇಷಣಾ ವಿಮಾನವನ್ನು ಡಿಯಾಗೋ ಗಾರ್ಷಿಯಾ ಮೂಲಕ ಹಿಂದೂ ಮಹಾಸಾಗರದತ್ತ ರವಾನೆ ಮಾಡಿತ್ತು. ಹೀಗಾಗಿ ಭಾರತದ ಎಸ್ಯಾಟ್ ಕ್ಷಿಪಣಿ ಯೋಜನೆ ಬಗ್ಗೆ ಅಮೆರಿಕಕ್ಕೆ ಮೊದಲೇ ತಿಳಿದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದೀಗ ಈ ವರದಿಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪೆಂಟಗನ್, ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದಾಗಿದ್ದು, ತಾನು ಎಸ್ಯಾಟ್ ಪರೀಕ್ಷೆಯ ಗೂಢಚಾರಿಕೆ ಮಾಡಿಲ್ಲ ಎಂದು ಹೇಳಿದೆ. 
'ಅಮೆರಿಕದ ಯಾವುದೇ ವಸ್ತುಗಳು ಭಾರತದ ಮೇಲೆ ಗೂಢಚಾರಿಕೆ ಮಾಡುತ್ತಿಲ್ಲ. ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರವಾಗಿದ್ದು, ನಮ್ಮ ಸ್ನೇಹ ಮತ್ತು ಸೌಹಾರ್ಧತೆಯನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಅಮೆರಿಕ ಕೆಲಸ ಮಾಡುತ್ತಿದೆ. ಉಭಯ ದೇಶಗಳ ನಡುವೆ ಬಲಿಷ್ಠ ಆರ್ಥಿಕ ಸಂಬಂಧ ಹೊಂದಲು ಅಮೆರಿಕ ಬಯಸುತ್ತದೆ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಡೇವಿಡ್ ಡಬಲ್ಯೂ ಈಸ್ಟಬರ್ನ್ ಹೇಳಿದ್ದಾರೆ.
SCROLL FOR NEXT