ವಿದೇಶ

ಪಾಕ್ ಸರ್ಕಾರದ ವಿರುದ್ಧ ಟೀಕೆ: ಹಫೀಜ್ ಸಯೀದ್ ಸೋದರನ ಬಂಧನ

Raghavendra Adiga
ಇಸ್ಲಾಮಾಬಾದ್:  ವಿಶ್ವಸಂಸ್ಥೆಯಿಂದ ಇತ್ತೀಚೆಗಷ್ಟೇ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ನಿಷೇಧಿತ ಜಮಾಅತುದ್ದಾವಾದ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನ ಭಾಮೈದನನ್ನು ಪಾಕಿಸ್ತಾನದ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ನಿಷೇಧಿತ ಸಂಘಟನೆಯ ವಿರುದ್ಧ ತೆಗೆದುಕೊಂಡ ಕ್ರಮಗಳಡಿ, ಅಬ್ದುಲ್ ರಹ್ಮಾನ್‌ ಮಕ್ಕಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಎಫ್‌ಎಟಿಎಫ್‌ ಮಾರ್ಗದರ್ಶಿಸೂತ್ರಗಳಡಿ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಟೀಕಿಸಿದ್ದ ಮತ್ತು ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದಾನೆ.  ಸಾರ್ವಜನಿಕ ಆದೇಶ ಕಾಯ್ದೆಯ ನಿರ್ವಹಣೆಯಡಿ ರಹ್ಮಾನ್ ಮಕ್ಕಿಯನ್ನು ಬಂಧಿಸಲಾಗಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ
ರಹ್ಮಾನ್ ಮಕ್ಕಿಯು, ಜಮಾಅತುದ್ದಾವಾದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಮುಖ್ಯಸ್ಥನಾಗಿದ್ದಾನೆ ಮತ್ತು ನಿಧಿ ಸಂಗ್ರಹಿಸುವ ಫಲಾಹ್‌ ಇ ಇನ್ಸಾನಿಯತ್‌ ಟ್ರಸ್ಟ್‌ ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ.
ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಪಾಕಿಸ್ತಾನ ಸರ್ಕಾರ ನಿಷೇಧಿತ ಸಂಘಟನೆಯ ವಿರುದ್ಧ ಕ್ರಮ ಆರಂಭಿಸಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಿಂದ ನಿಷೇಧಕ್ಕೊಳಗಾದ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವವರ ಬ್ಯಾಂಕ್ ಖಾತೆ ಜಪ್ತಿ ಮತ್ತು ಮುಟ್ಟುಗೋಲು ಹಾಕುವುದಾಗಿ ಪಾಕಿಸ್ತಾನ ಘೋಷಿಸಿದೆ.
SCROLL FOR NEXT