ವಿದೇಶ

ಅಮೆರಿಕವನ್ನು ಕೆಣಕುವ ದುಸ್ಸಾಹಸ ಬೇಡ: ಇರಾನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

Srinivasamurthy VN
ವಾಷಿಂಗ್ಟನ್‌: ಅಮೆರಿಕವನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಶೀಥಲ ಸಮರ ಮತ್ತೆ ತಾರಕಕ್ಕೇರಿದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಮತ್ತು ಇರಾನ್ ರಾಷ್ಟ್ರಗಳು ಕ್ರಮೇಣ ತಮ್ಮ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಆ ಭಾಗದಲ್ಲಿ ಯುದ್ಧ ಭೀತಿ ಸೃಷ್ಟಿಸಿವೆ. ಇದಕ್ಕೆ ಇಂಬು ನೀಡುವಂತೆ ಉಭಯ ದೇಶಗಳ ರಾಜಕೀಯ ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ಇರಾನ್ ಗೆ ಇದೀಗ ಅಮೆರಿಕ ಕೂಡ ತಿರುಗೇಟು ನೀಡಿದ್ದು, ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.
'ಇರಾನ್‌ ದುಸ್ಸಾಹಸಕ್ಕೆ ಮುಂದಾದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಇರಾನ್‌ ದುಷ್ಕೃತ್ಯದ ಬಗ್ಗೆ ಕೇಳಿದ್ದೇವೆ. ಇದು ಮುಂದುವರಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಒಂದೊಮ್ಮೆ ಇರಾನ್‌ ದಾಳಿ ನಡೆಸಲು ಮುಂದಾದರೆ, ಅದು ಇರಾನ್ ನಿಂದಾಗುವ ದೊಡ್ಡ ಪ್ರಮಾದವಾಗಲಿದೆ ಎಂದು ಹೇಳಿದ್ದಾರೆ.
ಮಾಸ್ಕೊ ಪ್ರವಾಸ ರದ್ದುಪಡಿಸಿ ಪೊಪಿಯೊ ಮೈಕ್‌
ಅತ್ತ ಇರಾನ್ ಮತ್ತು ಅಮೆರಿಕ ನಡುವಿನ ಶೀಥಲ ಸಮರ ತಾರಕಕ್ಕೇರಿದ ಬೆನ್ನಲ್ಲೇ ಇತ್ತ ಅಮೆರಿಕ ರಾಜ್ಯ ಕಾರ್ಯದರ್ಶಿ ಪೊಪಿಯೊ ಮೈಕ್‌ ಅವರು ತಮ್ಮ ಬಹು ನಿರೀಕ್ಷಿತ ರಷ್ಟಾ ಪ್ರವಾಸ ರದ್ದುಪಡಿಸಿದ್ದಾರೆ. ಅಲ್ಲದೆ ಬ್ರುಸೆಲ್ ನಲ್ಲಿ ನ್ಯಾಟೊ ಮೈತ್ರಿಕೂಟಗಳ ಜೊತೆಗೆ ಸಭೆ ನಡೆಸಿದ್ದು, ಇರಾನ್‌ ಜೊತೆಗಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.  
ಇರಾನ್ ನೊಂದಿಗೆ 2015ರಲ್ಲಿ ಮಾಡಿಕೊಳ್ಳಲಾದ ಅಣು ಒಪ್ಪಂದವನ್ನು ಅಮೆರಿಕ ಕಳೆದ ವರ್ಷ ಹಿಂತೆಗೆದುಕೊಂಡಿತ್ತು. ಈ ಬೆಳವಣಿಗೆ ಬಳಿಕ ಉಭಯ ದೇಶಗಳ ನಡುವೆ ಸಂಘರ್ಷ ತಾರಕಕ್ಕೇರಿದೆ.
SCROLL FOR NEXT