ವಿದೇಶ

ನೇಪಾಳ: ಕಾಂಚೆನ್ ಜುಂಗಾದಲ್ಲಿ ಭಾರತ ಮೂಲದ ಇಬ್ಬರು ಪರ್ವತಾರೋಹಿಗಳ ಸಾವು!

Srinivasamurthy VN
ಕಠ್ಮಂಡು: ನೇಪಾಳದ ಕಾಂಚೆನ್ ಜುಂಗಾ ಪರ್ವತದಲ್ಲಿ ಪರ್ವತಾರೋಹಣದ ವೇಳೆ ದುರಂತ ಸಂಭವಿಸಿದ್ದು, ಭಾರತ ಮೂಲದ ಇಬ್ಬರು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದ್ದು, ವಿಶ್ವದ ಮೂರನೇ ಎತ್ತರದ ಶಿಖರ ಮೌಂಟ್ ಕಾಂಚೆನ್ ಜುಂಗಾದಲ್ಲಿ ಪರ್ವತಾರೋಹಣಕ್ಕೆ ತೆರಳಿದ್ದ ಪರ್ವತಾರೋಹಿಗಳು ಅಪಘಾತಕ್ಕೀಡಾಗಿದ್ದಾರೆ. ಈ ವೇಳೆ ನಡೆದ ದುರಂತದಲ್ಲಿ ಭಾರತ ಮೂಲದ ಇಬ್ಬರು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಮೃತ ಪರ್ವತಾರೋಹಿಗಳನ್ನು 48 ವರ್ಷದ ಬಿಪ್ಲಬ್ ಬೈದ್ಯಾ ಮತ್ತು 46ವರ್ಷದ ಕುಂತಾಲ್ ಕನ್ರಾರ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದವರು ಎಂದು ತಿಳಿದುಬಂದಿದೆ.
ವರದಿಯಲ್ಲಿರುವಂತೆ ಪರ್ವತಾರೋಹಿಗಳು ಮೌಂಟ್ ಕಾಂಚೆನ್ ಜುಂಗಾದ ಸುಮಾರು 8,000 ಮೀಟರ್ ಎತ್ತರದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೀಕ್ ಪ್ರಮೋಷನ್ ಹೈಕಿಂಗ್ ಕಂಪನಿ ಪರ್ವತಾರೋಹಣ ಆಯೋಜನೆ ಮಾಡಿದ್ದು ಈ ಪರ್ವತಾ ರೋಹಣದಲ್ಲಿ ಹಲವು ಪ್ರವಾಸಿಗರು ಪಾಲ್ಗೊಂಡಿದ್ದರು. ಕಾಂಚೆನ್ ಜುಂಗಾ ಪರ್ವತ ಏರುವಾಗ ಸುಮಾರು 8,586 ಎತ್ತರದಲ್ಲಿ ಭಾರತ ಮೂಲದ ಬೈದ್ಯಾ ಅನಾರೋಗ್ಯಕ್ಕೆ ತುತ್ತಾದರು. ಬಳಿಕ ಅವರು ಸಾವನ್ನಪ್ಪಿದರು. ಅಂತೆಯೇ ಕನ್ರಾರ್ ಕೂಡ ಪರ್ವತದ ತುತ್ತಿಯತ್ತ ಸಾಗುವಾಗ ಮೃತಪಟ್ಟರು ಎಂದು ಹೇಳಿದೆ.
ಇನ್ನು ಪರ್ವತಾರೋಹಣದ ಸೀಸನ್ ಇದೇ ಮೇ ತಿಂಗಳಲ್ಲಿ ಅಂತ್ಯವಾಗಲಿದ್ದು, ಇದೇ ಕಾರಣಕ್ಕೆ ವಿಶ್ವದ ಮೂಲೆ ಮೂಲೆಯಿಂದ ನೂರಾರು ಪರ್ವತಾರೋಹಿಗಳು ಆಗಮಿಸುತ್ತಿದ್ದಾರೆ. 
SCROLL FOR NEXT