ವಿದೇಶ

'ಮೋದಿಯಂತಹ ನಾಯಕನನ್ನು ಹೊಂದಿರುವುದು ಭಾರತೀಯರ ಅದೃಷ್ಟ'

Srinivasamurthy VN
ವಾಷಿಂಗ್ಟನ್: ನರೇಂದ್ರ ಮೋದಿ ಅವರಂತಹ ನಾಯಕನನ್ನು ಹೊಂದಿರುವುದು ಭಾರತೀಯರ ಅದೃಷ್ಟ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಾಲಿ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳೊಂದಿಗೆ ಸತತ 2ನೇ ಬಾರಿಗೆ ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಅಧಿಕಾರಗ ಗದ್ದುಗೆ ಹಿಡಿಯುತ್ತಿರುವ ನರೇಂದ್ರ ಮೋದಿ ಅವರಿಗೆ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕರೆ ಮಾಡಿ ಶುಭ ಕೋರಿದ್ದಾರೆ. 
ಈ ಕುರಿತಂತೆ ಟ್ರಂಪ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ ಟ್ರಂಪ್, ಭಾರತ ಮತ್ತು ಅಮೆರಿಕ ನಡುವಿನ ಸೌಹಾರ್ಧ ಸಂಬಂಧ ನಿಮ್ಮ ನಾಯಕತ್ವದಲ್ಲಿ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಹೇಳಿದ್ದಾರೆ.
ಅಂತೆಯೇ ಭಾರತದ ಯಾವುದೇ ಸಾಧನೆಗಳಿಗೆ ಬೆನ್ನೆಲುಬಾಗಿ ನಿಲ್ಲಲು ಅಮೆರಿಕ ಸಿದ್ದವಿದೆ ಎಂದು ವಿಶ್ವಾಸ ನೀಡಿರುವ ಟ್ರಂಪ್, ಜಪಾನ್ ನ ಒಸಾಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪರಸ್ಪರ ಭೇಟಿಯಾಗುವ ಕುರಿತು ಆಹ್ವಾನ ನೀಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಅವರೂ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಇದೇ ಜೂನ್ 28 ಮತ್ತು 29 ರಂದು ಜಪಾನ್ ನ ಒಸಾಕಾದಲ್ಲಿ ಜಿ20 ಶೃಂಗಸಭೆ ಆಯೋಜನೆಯಾಗಿದ್ದು, ಈ ವೇಳೆ ಭಾರತ, ಜಪಾನ್ ಮತ್ತು ಅಮೆರಿಕ ತ್ರಿಪಕ್ಷೀಯ ಮಾತುಕತೆ ನಡೆಸಲಿವೆ. 
ಇನ್ನು ವಾಣಿಜ್ಯಾತ್ಮಕವಾಗಿ ಜಾಗತಿಕವಾಗಿ ಬೆಳೆಯುತ್ತಿರುವ ಚೀನಾ ಪ್ರಾಬಲ್ಯ ನಿಯಂತ್ರಿಸಲು ಈ ಮೂರು ರಾಷ್ಟ್ರಗಳು ಜಿ20 ಶೃಂಗಸಭೆಯಲ್ಲಿ ಮಹತ್ತರ ವಾಣಿಜ್ಯಾತ್ಮಕ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
SCROLL FOR NEXT