ವಿದೇಶ

ಆರ್‌ಸಿಇಪಿ ಒಪ್ಪಂದಕ್ಕೆ ಭಾರತ ಸೂಕ್ತ ಮತ್ತು ಸಮಂಜಸ ಪ್ರಸ್ತಾಪಗಳನ್ನು ಮುಂದಿಟ್ಟಿದೆ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ಬ್ಯಾಂಕಾಕ್: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (ಆರ್‌ಸಿಇಪಿ) ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಭಾರತ ಸೂಕ್ತವಾದ ಪ್ರಸ್ತಾಪಗಳನ್ನು ಮುಂದಿಟ್ಟು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪ್ರಾಮಾಣಿಕವಾಗಿ ಮಾತುಕತೆಯಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 


ಬ್ಯಾಂಕಾಕ್ ನಲ್ಲಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ಪರಸ್ಪರ ಸಹಾಯವಾಗುವ ಆರ್ ಸಿಇಪಿ ಒಪ್ಪಂದ ಕುರಿತು ಭಾರತ ಅತ್ಯಂತ ಸ್ಪಷ್ಟವಾಗಿದೆ, ಇಲ್ಲಿ ಎಲ್ಲಾ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಂಡು ತಮ್ಮ ತಮ್ಮ ದೇಶಗಳ ಹಿತಾಸಕ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನ್ಯಾಯಸಮ್ಮತವಾದ ಅಭಿಪ್ರಾಯವನ್ನು ಮುಂದಿಡುತ್ತಿವೆ ಎಂದರು.


10 ಆಸಿಯಾನ್ ರಾಷ್ಟ್ರಗಳು ಮತ್ತು ಇತರ ಆರು ದೇಶಗಳಾದ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳು ಮುಂದಿನ ಸೋಮವಾರ ಶೃಂಗಸಭೆಯಲ್ಲಿ ಒಪ್ಪಂದವೇರ್ಪಡಿಸಲು ಮಾತುಕತೆಯಲ್ಲಿ ತೊಡಗಿವೆ ಎಂದರು.


ವಿಶ್ವದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ಈ 16 ದೇಶಗಳಲ್ಲಿದ್ದು, ಆರ್ ಸಿಇಪಿ ಒಪ್ಪಂದದಿಂದ ವಿಶ್ವದ ಅತಿದೊಡ್ಡ ಮುಕ್ತ-ವ್ಯಾಪಾರ ಪ್ರದೇಶವನ್ನು ರಚಿಸಲು ಅನುಕೂಲವಾಗಲಿದೆ. ಆರ್‌ಸಿಇಪಿ ಒಪ್ಪಂದದಿಂದ ಸಮಗ್ರ ಮತ್ತು ಸಮತೋಲಿತ ಫಲಿತಾಂಶ ಹೊರಬರಲು ಭಾರತ ಬದ್ಧವಾಗಿದೆ. ಇದರಲ್ಲಿ ಭಾಗಿಯಾಗುವ ಪ್ರತಿಯೊಂದು ದೇಶಗಳ ಯಶಸ್ಸನ್ನು ಇದು ಒಳಗೊಂಡಿದೆ. ಆದ್ದರಿಂದ, ಭಾರತ ಸರಕು- ಸೇವೆಗಳು ಮತ್ತು ಹೂಡಿಕೆಗಳಲ್ಲಿ ಮತ್ತು ಪ್ರತಿ ಕ್ಷೇತ್ರದಲ್ಲಿ ಸಮತೋಲನವನ್ನು ಬಯಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


ಪ್ರಧಾನಿಯವರು ಇಂದಿನಿಂದ 4ನೇ ತಾರೀಕಿನವರೆಗೆ ನಡೆಯಲಿರುವ ಭಾರತ-ಆಸಿಯಾನ್ ಶೃಂಗಸಭೆ, ಪೂರ್ವ ಏಷಿಯಾ ಶೃಂಗಸಭೆ ಮತ್ತು ಆರ್ ಸಿಇಪಿ ಶೃಂಗಸಭೆಗಳಲ್ಲಿ ಭಾಗವಹಸಲಿದ್ದಾರೆ.

SCROLL FOR NEXT