ವಿದೇಶ

ಭಾರತದ ತ್ಯಾಜ್ಯ ಲಾಸ್ ಏಂಜಲೀಸ್ ಗೆ ಬಂದು ತಲುಪುತ್ತಿದೆ: ಡೊನಾಲ್ಡ್ ಟ್ರಂಪ್! 

Srinivas Rao BV

ನ್ಯೂಯಾರ್ಕ್: ತಮ್ಮ ವಿಚಿತ್ರ ಹೇಳಿಕೆಗಳಿಂದಲೇ ಜಗತ್ತಿನಾದ್ಯಂತ ಸುದ್ದಿಯಾಗುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಅಂತಹದ್ದೇ, ಎಲ್ಲರ ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ. 

ಎಕನಾಮಿಕ್ ಕ್ಲಬ್ ಆಫ್ ನ್ಯೂಯಾರ್ಕ್ ನಲ್ಲಿ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2015 ರ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿದಿದ್ದರ ಬಗ್ಗೆ ಮಾತನಾಡಿದ್ದು, ಭಾರತ, ಚೀನಾ ಹಾಗೂ ರಷ್ಯಾದಂತಹ ರಾಷ್ಟ್ರಗಳು ತಮ್ಮ ದೇಶಗಳಲ್ಲಿರುವ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳನ್ನು ಸ್ವಚ್ಛಮಾಡುತ್ತಿಲ್ಲ. ಅವರು ಸಮುದ್ರಕ್ಕೆ ಹಾಕುವ ತ್ಯಾಜ್ಯ ಲಾಸ್ ಏಂಜಲೀಸ್ ನಲ್ಲಿ ತೇಲುತ್ತಿದೆ ಎಂದು ಹೇಳಿದ್ದಾರೆ.

ಹವಾಮಾನ ಬದಲಾವಣೆಯನ್ನು ಬಹಳ ಸಂಕೀರ್ಣ ವಿಷಯ ಎಂದು ಹೇಳಿರುವ ಡೊನಾಲ್ಡ್ ಟ್ರಂಪ್, ತಮ್ಮನ್ನು ತಾವೇ  ಹಲವು ರೀತಿಗಳಲ್ಲಿ ಪರಿಸರವಾದಿ ಎಂದೂ ಕರೆದುಕೊಂಡಿದ್ದಾರೆ. 

ಭೂಮಿಯಲ್ಲಿ ಅತ್ಯಂತ ಶುದ್ಧ ಗಾಳಿ-ನೀರು ಬೇಕೆಂದು ನಾನು ಹೇಳುವೆ ಎಂದಿರುವ ಟ್ರಂಪ್ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅತ್ಯಂತ ಭೀಕರ ಎಂದು ಹೇಳಿದ್ದು, ಇದರಿಂದಾಗಿ ಅಮೆರಿಕನ್ನರ ಕೆಲಸಗಳು ಹೋಗುತ್ತವೆ, ಹಾಗೂ ಟ್ರಿಲಿಯನ್ ಗಟ್ಟಲೆ ಡಾಲರ್ ಗಳ ನಷ್ಟ ಉಂಟುಮಾಡಿ ಅಮೆರಿಕಾಗೆ ಮಾರಕವಾಗಿ ಪರಿಣಮಿಸುತ್ತದೆ. ಅಷ್ಟೇ ಅಲ್ಲದೇ ಅಮೆರಿಕದ ಮೇಲೆ ಈ ರೀತಿಯ ಪರಿಣಾಮ ಬೀರುವುದರ ಹೊರತಾಗಿ, ಮಾಲಿನ್ಯ ಉಂಟುಮಾಡುತ್ತಿರುವ ವಿದೇಶಗಳನ್ನು ರಕ್ಷಿಸುತ್ತದೆ ಎಂದು ಆರೋಪಿಸಿದ್ದಾರೆ.

SCROLL FOR NEXT