ವಿದೇಶ

ಬ್ರೆಜಿಲ್ ನಲ್ಲಿ ಕ್ಸಿ ಜಿನ್ ಪಿಂಗ್ -ನರೇಂದ್ರ ಮೋದಿ ಭೇಟಿ; ದ್ವಿಪಕ್ಷೀಯ-ಬಹುಪಕ್ಷೀಯ ಹಂತದ ಮಾತುಕತೆ, ಚರ್ಚೆ 

Sumana Upadhyaya

ಬ್ರೆಸಿಲಿಯಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬ್ರೆಜಿಲ್ ನಲ್ಲಿ ಭೇಟಿ ಮಾಡಿ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿ ಹೊಸ ಚೈತನ್ಯವನ್ನು ಮೂಡಿಸಲು, ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಕಟ ಸಂಪರ್ಕ ಸಾಧಿಸುವ ಕುರಿತು ಮಾತುಕತೆ ನಡೆಸಿದರು. 


ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾದಲ್ಲಿ 11ನೇ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದ್ದು ಅದರ ಹೊರಗೆ ಉಭಯ ನಾಯಕರು ಭೇಟಿ ಮಾಡಿದ್ದಾರೆ. ಮಾತುಕತೆ ನಂತರ ಹೇಳಿಕೆ ನೀಡಿರುವ ಪ್ರಧಾನ ಮಂತ್ರಿ ಸಚಿವಾಲಯ, ಚೆನ್ನೈಯಲ್ಲಿ ಕಳೆದ ಬಾರಿ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಮಾತನಾಡಿದ ನಂತರ ಭಾರತ-ಚೀನಾ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಹೊಸ ದಿಕ್ಕಿನತ್ತ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದೆ. 

ಬ್ರೆಜಿಲ್ ನಲ್ಲಿ ಬ್ರಿಕ್ಸ್ ಶೃಂಗಸಭೆಯ ಹೊರಗೆ ಉಭಯ ನಾಯಕರ ಮಾತುಕತೆ ಫಲಪ್ರದವಾಗಿ ನಡೆದಿದೆ. ಇಬ್ಬರೂ ನಾಯಕರು ನಡೆಸಿದ ಮಾತುಕತೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಪ್ರಮುಖ ವಿಷಯಗಳಾಗಿವೆ ಎಂದು ಟ್ವೀಟ್ ಮಾಡಿದೆ.


ಉಭಯ ನಾಯಕರು ಭಾರತ-ಚೀನಾ ಸಂಬಂಧದ ವಿವಿಧ ಅಂಶಗಳ ಕುರಿತು ಬಹುಮುಖಿ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಸಾಧ್ಯವಾದಷ್ಟು ಬೇಗ ವ್ಯಾಪಾರ ಮತ್ತು ಆರ್ಥಿಕತೆಯಲ್ಲಿ ಉನ್ನತ ಮಟ್ಟದ ಕಾರ್ಯವಿಧಾನವನ್ನು ತರಬೇಕೆಂದು ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.


ಮಾತುಕತೆ ನಂತರ ಚೀನಾ ಅಧ್ಯಕ್ಷರು ಪ್ರಧಾನಿ ಮೋದಿಯವರನ್ನು ಮುಂದಿನ ವರ್ಷ ಚೀನಾದಲ್ಲಿ ನಡೆಯಲಿರುವ 3ನೇ ಅನೌಪಚಾರಿಕ ಶೃಂಗಸಭೆಗೆ ಆಹ್ವಾನಿಸಿದ್ದಾರೆ.

SCROLL FOR NEXT