ವಿದೇಶ

ಮುರಳೀಧರನ್ ಶ್ರೀಲಂಕಾ ಗವರ್ನರ್!

Srinivasamurthy VN

ಕೊಲಂಬೋ: ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಶ್ರೀಲಂಕಾ ಉತ್ತರ ಪ್ರಾಂತ್ಯದ ಗವರ್ನರ್ ಆಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಈ ಹುದ್ದೆ ಸ್ವೀಕರಿಸುವಂತೆ ಅಧ್ಯಕ್ಷ ಗೊಟಬಯಾ ರಾಜಪಕ್ಸ ಅವರು ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗಿದ್ದು, ಮುತ್ತಯ್ಯ ಮುರಳೀಧರನ್ ಅವರು ಉತ್ತರೀಯ ಪ್ರಾಂತ್ಯಕ್ಕೆ ರಾಜ್ಯಪಾಲರಾಗುತ್ತಿದ್ದಾರೆ.

ಆದರೆ, ಮುರಳೀಧರನ್ ಗವರ್ನರ್ ಆಗುವುದಕ್ಕೆ ಸ್ಥಳೀಯ ತಮಿಳರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ತಮಿಳರ ವಿರೋಧದ ನಡುವೆಯೂ ಮುತ್ತಯ್ಯಗೆ ಮಹತ್ವದ ಹುದ್ದೆಯನ್ನು ಗೋಟಾಬಯ ನೀಡಿರುವುದು ಗಮನಾರ್ಹ. ಮಹಿಂದಾ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷರಾಗಿದ್ದಾಗ, ಹಾಗೂ ಗೋಟಾಬಯ ರಾಜಪಕ್ಸ ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ ತಮಿಳರ ಮೇಲೆ ನಿರಂತರ ದೌರ್ಜನ್ಯ ನಡೆದ ಆರೋಪಗಳಿವೆ. 2005ರಿಂದ 2015ರ ಈ ಅವಧಿಯಲ್ಲಿ ತಮಿಳಿಗರ ಆತ್ಮರಕ್ಷಣಾ ಹೋರಾಟವನ್ನು ರಾಜಪಕ್ಸ ಕುಟುಂಬ ಅಮಾನುಷವಾಗಿ ಹತ್ತಿಕ್ಕಿತೆನ್ನಲಾಗಿದೆ. 

ಆದರೆ, ಮುತ್ತಯ್ಯ ಮುರಳೀಧರನ್ ಅವರು ಲಂಕಾ ತಮಿಳರ ಮೇಲೆ ಯಾವುದೇ ರೀತಿಯ ಅನ್ಯಾಯ ಜರುಗಿಲ್ಲ ಎಂದು ಹೇಳಿಕೆ ನೀಡಿ ತಮಿಳರ ಆಕ್ರೋಶಕ್ಕೆ ತುತ್ತಾಗಿದ್ದಾರೆ.  ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಟಾಬಯ ರಾಜಪಕ್ಸ ಅವರು ಶೇ. 52.25ರಷ್ಟು ಮತ ಪಡೆದು ಭರ್ಜರಿ ಗೆಲುವು ಪಡೆದರು. ಪ್ರಮುಖ ಎದುರಾಳಿ ಸಜಿತ್ ಪ್ರೇಮದಾಸ ಶೇ. 41.99 ಮತ ಪಡೆದು ಎರಡನೇ ಸ್ಥಾನ ಪಡೆದರು. ಮೂರನೇ ಸ್ಥಾನ ಪಡೆದ ಅನುರಾ ಕುಮಾರ ಡಿಸ್ಸನಾಯಕ ಪಡೆದ ಮತ ಪ್ರಮಾಣ ಕೇವಲ ಶೇ. 3.16 ಮಾತ್ರ. ಇನ್ನುಳಿದ 33 ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಕೂಡ ಒಂದು ಪ್ರತಿಶತದಷ್ಟು ಮತ ಕೂಡ ಪಡೆಯಲಿಲ್ಲ.

SCROLL FOR NEXT