ವಿದೇಶ

ಕಾಶ್ಮೀರ ವಿಚಾರವಾಗಿ ಭಾರತದ ನಿಲುವು ಸ್ಪಷ್ಟ, ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ: ಅಮೆರಿಕಕ್ಕೆ ಜೈ ಶಂಕರ್ ಸ್ಪಷ್ಟನೆ

Srinivasamurthy VN

ವಾಷಿಂಗ್ಟನ್: ಕಾಶ್ಮೀರ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದ್ದು, ಮೂರನೇ ವ್ಯಕ್ತಿ ಅಥವಾ ರಾಷ್ಟ್ರದ ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕದ ನ್ಯೂಯಾರ್ಕ್ ಗೆ ತೆರಳಿದ್ದ ಜೈ ಶಂಕರ್ ಭಾನುವಾರ ವಾಷಿಂಗ್ಟನ್ ಗೆ ಆಗಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರ ವಿಚಾರವಾಗಿ ಭಾರತ ತನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದೆ. ಕಾಶ್ಮೀರ ವಿಚಾರವಾಗಿ ಮೂರನೇ ವ್ಯಕ್ತಿ ಅಥವಾ ರಾಷ್ಟ್ರದ ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ. ಕಾಶ್ಮೀರ ವಿವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವೀಪಕ್ಷೀಯ ಸಮಸ್ಯೆಯಾಗಿದ್ದು, ದ್ವಿಪಕ್ಷೀಯ ಮಾತುಕತೆ ಮೂಲಕವೇ ಇತ್ಯರ್ಥವಾಗಬೇಕು. ಇದರಲ್ಲಿ ಮೂರನೇಯವರ ಮಧ್ಯಸ್ಥಿಕೆ ಬೇಕಿಲ್ಲ ಎಂದು ಹೇಳಿದರು.

ಇನ್ನು ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯ ನಡುವೆಯೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರನ್ನು ಭೇಟಿ ಮಾಡಿದ ಜೈ ಶಂಕರ್ ಅವರು ಈ ವಿಚಾರವನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ.  ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಜೈ ಶಂಕರ್, ಕಾಶ್ಮೀರ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ 40 ವರ್ಷಗಳಿಂದಲೂ ಭಾರತ ತನ್ನ ನಿಲುವು ಸ್ಪಷ್ಟ ಪಡಿಸುತ್ತಾ ಬಂದಿದೆ. ಯಾವುದೇ ಕಾರಣಕ್ಕೂ ಕಾಶ್ಮೀರ ವಿಚಾರವಾಗಿ ಭಾರತ ಮಧ್ಯಸ್ಥಿಕೆ ಒಪ್ಪಿಕೊಳ್ಳುವುದಿಲ್ಲ. ಮೈಕ್ ಪಾಂಪಿಯೋ ಅವರೊಂದಿಗೆ ಭಾರತ, ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯವಹಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಜೈಶಂಕರ್ ಹೇಳಿದರು.

' ಸಮಸ್ಯೆ ನನ್ನದು. ಸಮಸ್ಯೆ ಕುರಿತು ನಿರ್ಧಾರ ಕೈಗೊಳ್ಳಬೇಕಾದವನು ನಾನು. ಈ ಬಗ್ಗೆ ಮೂರನೇ ವ್ಯಕ್ತಿಯ ಅವಶ್ಯಕತೆ ಏನಿದೆ. ನನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ನನ್ನಂದಿ ಸಾಧ್ಯವಾಗುತ್ತಿಲ್ಲ ಎಂದಾಗ ಮಾತ್ರ ನಾನು ಮತ್ತೊಬ್ಬ ವ್ಯಕ್ತಿಯ ನೆರವು ಕೋರಬಹುದು ಎಂದು ಜೈ ಶಂಕರ್ ಖಡಕ್ ಉತ್ತರ ನೀಡಿದ್ದಾರೆ. ಅಂತೆಯೇ ಕಾಶ್ಮೀರ ವಿಚಾರವಾಗಿ ಭಾರತದ ನಿಲುವು ದೃಢವಾಗಿದ್ದು, ವಿಧಿ 370ರ ರದ್ದತಿ ಭಾರತ ದೃಢನಿಲುವಿಗೆ ಸ್ಪಷ್ಟ ಉದಾಹರಣೆ ಎಂದು ಹೇಳಿದರು. ಕಾಶ್ಮೀರಿ ಜನರ ಹಿತಾಸಕ್ತಿ ದೃಷ್ಟಿಯಿಂದ ಭಾರತ ಸರ್ಕಾರ ಮತ್ತಷ್ಟು ದಿಟ್ಟ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಜೈ ಶಂಕರ್ ಹೇಳಿದರು.

SCROLL FOR NEXT