ವಿದೇಶ

ಮೋದಿ-ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ ಭಾರತ ಗಡಿ ಭಾಗದಲ್ಲಿ ಚೀನಾ ಸೇನೆಯಿಂದ ತೀವ್ರ ತರಬೇತಿ

Sumana Upadhyaya

ನವದೆಹಲಿ: ಭಾರತ-ಚೀನಾ ಗಡಿ ಭಾಗ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್(ಎಲ್ಎಸಿ)ಯ ಉದ್ದಕ್ಕೂ 3 ಸಾವಿರದ 488 ಕಿಲೋ ಮೀಟರ್ ಉದ್ದದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ(ಪಿಎಲ್ಎ) ತೀವ್ರ ತರಬೇತಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಭಾರತ-ಚೀನಾ ಗಡಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ಎರಡೂ ದೇಶಗಳ ಸೇನೆಗಳು ನಿಯೋಜನೆಗೊಂಡಿರುವ ಪ್ರದೇಶಗಳಲ್ಲಿ ಚೀನಾ ಸೇನೆಯಿಂದ ಮದ್ದು ಗುಂಡುಗಳು ಮತ್ತು ಗ್ರೆನೇಡ್ ತರಬೇತಿ ನಡೆಯುತ್ತಿದೆ. ಜೊತೆಗೆ ತೀವ್ರವಾದ ಗುಂಡಿನ ತರಬೇತಿ ಕೂಡ ನಡೆಯುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.


ಈ ಹಿಂದೆ ಚೀನಾ ಸೇನೆಗೆ ಕ್ಷಿಷ್ಟಕರ ಪರ್ವತ ಶ್ರೇಣಿಯಲ್ಲಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗದಿದ್ದ ಕಡೆಗಳಲ್ಲಿ ಇಂದು ಭಾರತೀಯ ಸೇನಾಪಡೆಗೆ ಸಮನಾಗಿ ತನ್ನ ಶಕ್ತಿ, ಸಾಮರ್ಥ್ಯಗಳನ್ನು ತೋರಿಸಲು ಸಮರ್ಥವಾಗಿದೆ ಎಂದು ಸಾರಲು ಚೀನಾ ನಡೆಸುತ್ತಿರುವ ತಂತ್ರವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.


ಚೀನಾ ಈ ಪ್ರದೇಶದಲ್ಲಿ ಕೈಗೊಂಡ ರಸ್ತೆ ನಿರ್ಮಾಣ ಕಾರ್ಯಗಳಿಂದ ಗಡಿ ಭಾಗದಲ್ಲಿ ವೇಗವಾಗಿ ಓಡಾಡಲು ಸಾಧ್ಯವಾಗುತ್ತಿದೆ ಮತ್ತು ಭಾರತೀಯ ಗಡಿಭಾಗಕ್ಕೆ ಇನ್ನಷ್ಟು ಹತ್ತಿರವಾಗಿದೆ. ಈ ಪ್ರದೇಶದಲ್ಲಿ ಒಂದು ವರ್ಷ ಹಿಂದೆ 400ಕ್ಕೂ ಹೆಚ್ಚು ತರಬೇತಿ ಚಟುವಟಿಕೆಗಳು ಮತ್ತು ಕಳೆದ ವರ್ಷ 450ಕ್ಕೂ ಹೆಚ್ಚು ಚಟುವಟಿಕೆಗಳು ನಡೆದಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೀನಾ ಎರಡು ಹೊಸ ತರಬೇತಿ ವಿಧಾನಗಳನ್ನು ಜಾರಿಗೆ ತಂದಿದ್ದು ಇದೇ ಮೊದಲ ಬಾರಿಗೆ ಕೊಟ್ಟ ಕೆಲಸವನ್ನು ಪೂರ್ಣಗೊಳಿಸದ ತಂಡಗಳಿಗೆ ಶಿಕ್ಷೆ ನೀಡುವ ವಿಧಾನ ಜಾರಿಗೆ ತಂದಿದೆ.

SCROLL FOR NEXT