ವಿದೇಶ

ಜಾಗತಿಕ ಹಸಿವು ಸೂಚ್ಯಾಂಕ: ನೇಪಾಳ, ಪಾಕ್, ಬಾಂಗ್ಲಾಗಿಂತ ಕೆಳಗಿಳಿದ ಭಾರತ

Raghavendra Adiga

ನವದೆಹಲಿ: 117 ದೇಶಗಳ ಜಾಗತಿಕ ಹಸಿವು ಸೂಚ್ಯಂಕ 2019 ವರದಿ ಬಿಡುಗಡೆಯಾಗಿದ್ದು ಭಾರತ 102 ನೇ ಸ್ಥಾನಕ್ಕೆ ಕುಸಿದಿದೆ. 2018 ರಲ್ಲಿ 95 ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಪಟ್ಟಿಯಲ್ಲಿ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ.

ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ಸೇರಿದಂತೆ ಹದಿನೇಳು ದೇಶಗಳು ಐದಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದ್ದು ಅಗ್ರ ಸ್ಥಾನದಲ್ಲಿದೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ ವೆಬ್‌ಸೈಟ್ ಹೇಳಿದೆ.

ಐರಿಶ್  ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ ಸಿದ್ಧಪಡಿಸಿದ ವರದಿಯು ಭಾರತದಲ್ಲಿ ಹಸಿವಿನ ಮಟ್ಟ "ಗಂಭೀರ" ವಾಗಿದೆ ಎಂದು ಗುರುತಿಸಿದೆ.  2000 ರಲ್ಲಿ, ಭಾರತವು 113 ದೇಶಗಳಲ್ಲಿ 83 ನೇ ಸ್ಥಾನದಲ್ಲಿತ್ತು. ಈಗ, 117 ದೇಶಗಳು ಕಣದಲ್ಲಿದ್ದು,ಭಾರತ  102 ನೇ ಸ್ಥಾನಕ್ಕೆ ಇಳಿದಿದೆ. ಇದರ ಜಿಹೆಚ್‌ಐ ಸ್ಕೋರ್ ಕೂಡ ಕುಸಿದಿದೆ - 2005 ರಲ್ಲಿ 38.9 ಇದ್ದ ಅಂಕ  2010 ರಲ್ಲಿ 32 ಮತ್ತು ನಂತರ 2010 ಮತ್ತು 2019 ರ ನಡುವೆ 32 ರಿಂದ 30.3ಗೆ ತಲುಪಿದೆ.

ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ವ್ಯರ್ಥತೆ ಪ್ರಮಾಣ 2008-2012ರ ಅವಧಿಯಲ್ಲಿ ಶೇ 16.5 ರಿಂದ 2014-2018ರಲ್ಲಿ ಶೇ 20.8 ಕ್ಕೆ ಏರಿದೆ. 6 ರಿಂದ 23 ತಿಂಗಳ ವಯಸ್ಸಿನ ಎಲ್ಲ ಮಕ್ಕಳಲ್ಲಿ ಕೇವಲ 9.6 ಪ್ರತಿಶತದಷ್ಟು ಮಕ್ಕಳಿಗೆ ಮಾತ್ರ  "ಕನಿಷ್ಠ ಸ್ವೀಕಾರಾರ್ಹ ಆಹಾರ"  ಸಿಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

SCROLL FOR NEXT