ವಿದೇಶ

ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಖಂಡಿಸಲು ಭಾರತೀಯ ರಾಯಭಾರಿಗೆ ಪಾಕಿಸ್ತಾನದಿಂದ ಸಮನ್ಸ್

Srinivas Rao BV

ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ಕಚೇರಿ ಶುಕ್ರವಾರ ಭಾರತೀಯ ರಾಯಭಾರಿ ಕಚೇರಿಯ ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಅವರನ್ನು ಕರೆದು ಗಡಿ ನಿಯಂತ್ರಣದ ರೇಖೆಯಲ್ಲಿ ಭಾರತೀಯ ಸೇನೆ 'ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ' ಮಾಡುತ್ತಿದೆ ಎಂದು ಖಂಡಿಸಿದೆ.

ಭಾರತೀಯ ಸೇನೆ ಗುರುವಾರ ನಡೆಸಿದ ನಿರ್ದಾಕ್ಷಿಣ್ಯ ಮತ್ತು ಅಪ್ರಚೋದಿತ ಗುಂಡಿನ ದಾಳಿಯಿಂದ ಮೂವರು ನಾಗರಿಕರು ಸಾವನ್ನಪ್ಪಿದ್ದು, ನಾಲ್ಕು ವರ್ಷದ ಮಗುವಿಗೆ ಗಾಯವಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. 
ಭಾರತದ ಕದನ ವಿರಾಮ ಉಲ್ಲಂಘನೆಯು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಅಪಾಯವಾಗಿದೆ. ಅಲ್ಲದೆ, ಇದು ಕಾರ್ಯತಂತ್ರದ ತಪ್ಪು ಲೆಕ್ಕಾಚಾರಕ್ಕೆ ಕಾರಣವಾಗಬಹುದು ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ. 2003 ರ ಒಪ್ಪಂದವನ್ನು ಗೌರವಿಸಬೇಕು. ಕದನ ವಿರಾಮ ಉಲ್ಲಂಘನೆಯ ಇತರ ಘಟನೆಗಳ ಬಗ್ಗೆ ತನಿಖೆ ನಡೆಸಬೇಕು. ಒಪ್ಪಂದವನ್ನು ಗೌರವಿಸುವಂತೆ ಭಾರತೀಯ ಪಡೆಗಳಿಗೆ ಸೂಚಿಸಬೇಕು ಎಂದು ಪಾಕಿಸ್ತಾನ ಅಧಿಕಾರಿಗಳು ಅಹ್ಲುವಾಲಿಯಾ ಅವರೊಂದಿಗಿನ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಈ ವಾರದ ಆರಂಭದಲ್ಲಿ ಪಾಕಿಸ್ತಾನದ ವಸತಿ ವಸಾಹತುಗಳ ಮೇಲೆ ಭಾರತೀಯ ಪಡೆಗಳು ಗುಂಡು ಹಾರಿಸಿದ ನಂತರ ಉಂಟಾದ ಘರ್ಷಣೆಯಲ್ಲಿ ಸೈನಿಕ ಸೇರಿದಂತೆ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪಾಕ್‍ ಸೇನೆಯ ವಕ್ತಾರರು ಆರೋಪಿಸಿದ್ದರು.

SCROLL FOR NEXT