ವಿದೇಶ

ಮತ್ತೆ ದ್ವೇಷ ಸಾಧನೆಗಿಳಿದ ಪಾಕ್: ಮೋದಿ ಸೌದಿ ಪ್ರಯಾಣಕ್ಕೆ ವಾಯುಪ್ರದೇಶ ಬಳಕೆಗೆ ನಿಷೇಧ

Raghavendra Adiga

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಉಲ್ಲೇಖಿಸಿರುವ ಪಾಕಿಸ್ತಾನ ಪ್ರಧಾನಿ ನರೇಂದ್ರ ಮೋದಿಯವರ ಮುಂಬರುವ ಸೌದಿ ಅರೇಬಿಯಾ ಭೇಟಿಗೆ  ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನಿರಾಕರಿಸಿದೆ. ಪ್ರಧಾನಿ ಮೋದಿಯವರ  ವಿವಿಐಪಿ ವಿಮಾನವು ಪಾಕ್ ವಾಯುಪ್ರದೇಶದಲ್ಲಿ ಹಾದುಹೋಗಲು ನೆರೆರಾಷ್ಟ್ರ ಅನುಮತಿಯನ್ನು ನಿರಾಕರಿಸಿದ್ದಾಗಿ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಧಾನಿ ಮೋದಿಯವರಿಗೆ ದೇಶದ ವಾಯುಪ್ರದೇಶವನ್ನು ಬಳಸಲು ಅವಕಾಶ ನೀಡದಿರಲು ಪಾಕಿಸ್ತಾನ ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಸರ್ಕಾರಿ ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.

"ಬ್ಲ್ಯಾಕ್ ಡೇ" ಹಿನ್ನೆಲೆಯಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.ಈ ನಿರ್ಧಾರವನ್ನು ಭಾರತೀಯ ಹೈಕಮಿಷನರ್‌ಗೆ ಲಿಖಿತ ರೂಪದಲ್ಲಿ ತಿಳಿಸಲಾಗುತ್ತಿದೆ ಎಂದು ಖುರೇಷಿ ಹೇಳಿದರು.

ಕಾಶ್ಮೀರಿಗಳನ್ನು ಬೆಂಬಲಿಸಿ ಪಾಕಿಸ್ತಾನ ಭಾನುವಾರ "ಬ್ಲ್ಯಾಕ್ ಡೇ" ಆಚರಿಸುತ್ತಿದೆ.

ಮೋದಿ ಸೋಮವಾರ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಅಂತರರಾಷ್ಟ್ರೀಯ ವ್ಯಾಪಾರ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಸೌದಿಯ ಉನ್ನತ ನಾಯಕರೊಡನೆ  ಮಾತುಕತೆ ನಡೆಸಲಿದ್ದಾರೆ.

ಇದಕ್ಕೆ ಹಿಂದೆ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು  ಪ್ರಧಾನಿ ಮೋದಿಯವರ ಯುಎಸ್ ಭೇಟಿ ಸಮಯದಲ್ಲಿ ಸಹ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನಿರಾಕರಿಸಿತ್ತು. ಅಲ್ಲದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಅದೇ ತಿಂಗಳಲ್ಲಿ ಐಸ್ಲ್ಯಾಂಡ್ ಗೆ ತೆರಳುವಾಗಲು ಸಹ ನೆರೆರಾಷ್ಟ್ರ ತನ್ನ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡಿರಲಿಲ್ಲ.

SCROLL FOR NEXT