ವಿದೇಶ

ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಮಿಸೈಲ್ ದಾಳಿ: ಪಾಕ್ ಎಚ್ಚರಿಕೆ

Srinivasamurthy VN

ಇಸ್ಲಾಮಾಬಾದ್: ಕಾಶ್ಮೀರ ವಿಚಾರವಾಗಿ ಭಾರತಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಮಿಸೈಲ್ ದಾಳಿ ಮಾಡುವುದಾಗಿ ಪಾಕಿಸ್ತಾನದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಶ್ಮೀರ ವಿಚಾರವಾಗಿ ಭಾರತವನ್ನು ಏನೂ ಮಾಡಲಾಗದೇ ಕೈ ಕೈ ಹಿಸುಕಿಕೊಳ್ಳುತ್ತಿರುವ ಪಾಕಿಸ್ತಾನದ ನಾಯಕರ ಪ್ರಜ್ಞಾಹೀನ ಹೇಳಿಕೆಗಳ ಸರಣಿ ಮುಂದುವರೆದಿದ್ದು, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳ ವಿರುದ್ಧ ಕ್ಷಿಪಣಿ ದಾಳಿ ಮಾಡುವ ಕುರಿತ ಮಾತುಗಳನ್ನಾಡಿದ್ದಾರೆ.

ಇಮ್ರಾನ್ ಖಾನ್ ಸರ್ಕಾರದ ಕಾಶ್ಮೀರ ವ್ಯವಹಾರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಉಸ್ತುವಾರಿ ಸಚಿವ ಅಲಿ ಅಮೀನ್ ಗಂಡಾಪುರ ಇಂತಹುದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಕಾಶ್ಮೀರ ವಿಚಾರವಾಗಿ ಭಾರತವನ್ನು ಬೆಂಬಲಿಸುತ್ತಿರುವ ರಾಷ್ಟ್ರಗಳನ್ನು ನಾವು ಶತ್ರುಗಳು ಎಂದು ಪರಿಗಣಿಸುತ್ತೇವೆ. ಕಣಿವೆಯಲ್ಲಿ ಭಾರತವೇನಾದರೂ ಉದ್ಧಟತನ ತೋರಿ ಪರಿಸ್ಥಿತಿ ಕೈ ಮೀರುವ ಪರಿಸ್ಥಿತಿ ಬಂದರೆ, ಪಾಕಿಸ್ತಾನ ಯುದ್ಧವನ್ನು ಸಾರಲಿದೆ. ಅಲ್ಲದೆ ಭಾರತ ಮತ್ತು ಅದಕ್ಕೆ ಬೆಂಬಲ ನೀಡುವ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತ ವಿಡಿಯೋವನ್ನು ಪತ್ರಕರ್ತೆ ನೈಲಾ ಇನಾಯತ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಚಿವ ಗಂಡಾಪುರ್ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

SCROLL FOR NEXT