ವಿದೇಶ

ಮೋದಿ ಟಾರ್ಗೆಟ್ ಮುಸ್ಲಿಮರು..!; ಕಾಶ್ಮೀರ ಆಯ್ತು, ಈಗ ಎನ್ಆರ್ ಸಿ ವಿಚಾರದಲ್ಲೂ ಪಾಕ್ ಮಧ್ಯ ಪ್ರವೇಶ

Srinivasamurthy VN

ಇಸ್ಲಾಮಾಬಾದ್: ಕಾಶ್ಮೀರಕ್ಕೇ ವಿಶೇಷಾಧಿಕಾರ ನೀಡುವ ವಿಧಿ 370ರ ರದ್ದತಿ ಬಳಿಕ ಇದೀಗ ಪಾಕಿಸ್ತಾನ ಭಾರತದ ಎನ್ಆರ್ ಸಿ ವಿಚಾರದಲ್ಲೂ ಅನಗತ್ಯ ಮಧ್ಯ ಪ್ರವೇಶ ಮಾಡಿದ್ದು, ಮೋದಿ ಸರ್ಕಾರ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದೆ.

ನವೀಕರಿಸಿದ ರಾಷ್ಟ್ರೀಯ ನಾಗರಿಕರ ದಾಖಲೆಯ ಅಂತಿಮ ಪಟ್ಟಿ ಶನಿವಾರ ಹೊರಬಿದ್ದ ಕೂಡಲೇ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮೋದಿ ಸರ್ಕಾರದ ಮೇಲೆ ದಾಳಿ ನಡೆಸಿದ್ದು, ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್,  ಮುಸ್ಲಿಮರನ್ನು ಗುರಿಯಾಗಿಸುವ ನೀತಿಯ ಭಾಗವಾಗಿ ಎನ್‌ಆರ್‌ಸಿ ಜಾರಿಗೆ ತರಲಾಗಿದೆ ಎಂದು ಆರೋಪಿಸಿದ್ದಾರೆ. 

'ಮೋದಿ ಸರ್ಕಾರದ ಮುಸ್ಲಿಮರ ಜನಾಂಗೀಯ ಶುದ್ಧೀಕರಣದ ಕುರಿತ ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿನ ವರದಿಗಳು ಕಾಶ್ಮೀರವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಮುಸ್ಲಿಮರನ್ನು ಗುರಿಯಾಗಿಸುವ ನೀತಿಯ ಭಾಗವಾಗಿವೆ. ಇದು ವಿಶ್ವದಾದ್ಯಂತ ಎಚ್ಚರಿಕೆಯ ಗಂಟೆಯಾಗಿದೆ ಎಂದು ಖಾನ್ ಟ್ವೀಟ್ ಮಾಡಿ ಎನ್ಆರ್ ಸಿ ಅಂತಿಮ ಪಟ್ಟಿ ಕುರಿತ ವರದಿಗಳನ್ನು ಅವರು ಟ್ಯಾಗ್ ಮಾಡಿದ್ದಾರೆ. 

ಕಳೆದ ವಾರ ಸರಣಿ ಟ್ವೀಟ್‌ಗಳಲ್ಲಿ, ಖಾನ್ ಅವರು ಭಾರತ ಸರ್ಕಾರವನ್ನು ನಾಜಿ ಸಿದ್ದಾಂತವನ್ನು ಅನುಸರಿಸುವ ಫ್ಯಾಸಿಸ್ಟ್ ಎಂದು ಕರೆದಿದ್ದರು. ಅಂತೆಯೇ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ವಾರಗಗಳಿಂದ ಭಾರತದ ವಿರುದ್ಧದ ಟೀಕಾ ಪ್ರಹಾರ ನಡೆಸಿದ್ದ ಖಾನ್, ಭಾರತದಿಂದ ಮುಸ್ಲಿಮರ ಜನಾಂಗೀಯ ಶುದ್ಧೀಕರಣವು ವಿಶ್ವದಾದ್ಯಂತ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ನವೀಕರಿಸಿದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯ ಅಂತಿಮ ಪಟ್ಟಿ ಶನಿವಾರ ಹೊರಬಿದ್ದಿದೆ. 3.3 ಕೋಟಿ ಅರ್ಜಿದಾರರಲ್ಲಿ, 19,06,657 ಜನರನ್ನು ಹೊರಗಿಡಲಾಗಿದ್ದು, ಕಳೆದ ವರ್ಷ ಪ್ರಕಟವಾದ ಅಂತಿಮ ಕರಡಿನಲ್ಲಿ 40 ಲಕ್ಷ ಜನರಲ್ಲಿ ಅರ್ಧದಷ್ಟು ಜನರನ್ನು ಹೊರಗಿಡಲಾಗಿದೆ.

SCROLL FOR NEXT