ವಿದೇಶ

ಕಾಶ್ಮೀರ ವಿಚಾರವಾಗಿ ಲಂಡನ್ ನ ಭಾರತೀಯ ಹೈ ಕಮಿಷನ್ ಕಚೇರಿ ಮುಂದೆ ಪ್ರತಿಭಟನೆ; ಹಿಂಸಾಚಾರ 

Sumana Upadhyaya

ಲಂಡನ್: ಜಮ್ಮು-ಕಾಶ್ಮೀರ ವಿಷಯವಾಗಿ ಭಾರತ ಸರ್ಕಾರ ವಿರುದ್ಧ ಲಂಡನ್ ನ ಭಾರತೀಯ ಹೈ ಕಮಿಷನ್ ಕಚೇರಿ ಮುಂದೆ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿ ಕಟ್ಟಡಕ್ಕೆ ಹಾನಿಗೀಡಾದ ಘಟನೆ ನಡೆದಿದೆ.


ನಿನ್ನೆ ಲಂಡನ್ ನ ಭಾರತೀಯ ಹೈ ಕಮಿಷನ್ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅದು ಹಿಂಸಾತ್ಮಕ ತಿರುವು ಪಡೆದುಕೊಂಡು ಕಚೇರಿ ಆವರಣದಲ್ಲಿ ಹಾನಿಯಾಗಿದೆ ಎಂದು ಲಂಡನ್ ನ ಭಾರತೀಯ ಹೈ ಕಮಿಷನ್ ಕಚೇರಿ ಟ್ವೀಟ್ ಮಾಡಿದೆ. 


ಭಾರತ ಹೈಕಮಿಷನ್ ಕಚೇರಿ ಟ್ವೀಟ್ ಗೆ ಪ್ರತಿಕ್ರಿಯಿಸಿದ ಲಂಡನ್ ಮೇಯರ್ ಸಾದಿಕ್ ಖಾನ್, ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದು ಲಂಡನ್ ನ ಮೆಟ್ರೊ ಪೊಲೀಸ್ ಗಮನಕ್ಕೆ ವಿಷಯವನ್ನು ತಂದಿದ್ದೇನೆ ಎಂದರು.


ಕಳೆದ ಆಗಸ್ಟ್ 15ರಂದು ಇದೇ ಕಚೇರಿ ಮುಂದೆ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿತ್ತು. ಆ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಭಾರತೀಯರ ಮೇಲೆ ಪಾಕಿಸ್ತಾನ ಬೆಂಬಲಿಗರು ಮತ್ತು ಖಾಲಿಸ್ತಾನ ವಿರೋಧಿಗಳ ಗುಂಪು ಕಲ್ಲು ತೂರಾಟ ನಡೆಸಿ ಕಟ್ಟಡದ ಮೇಲೆ ಮೊಟ್ಟೆಗಳನ್ನು ಎಸೆದು ತೀವ್ರ ಪ್ರತಿಭಟನೆ ನಡೆಸಿದ್ದರು. ಅದು ಕೂಡ ಹಿಂಸಾತ್ಮಕ ರೂಪ ತಾಳಿತ್ತು.


ಘಟನೆಗೆ ಸಂಬಂಧಪಟ್ಟಂತೆ ಲಂಡನ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಪ್ರತಿಭಟನಾಕಾರನೊಬ್ಬನಿಂದ ಪೊಲೀಸರು ಉದ್ದದ ಕಠಾರಿಯನ್ನು ವಶಪಡಿಸಿಕೊಂಡಿದ್ದಾರೆ. 


ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು.

SCROLL FOR NEXT